

ಬೆಂಗಳೂರು: ಕಳೆದ ವಾರವಷ್ಟೇ ಕೇವಲ 2 ದಿನಗಳ ಅಂತರದಲ್ಲಿ ಕೋವಿಡ್-19 ಜಯಿಸಿರುವ ಸಿಕ್ಕಿ ರೆಡ್ಡಿ ಮಂಗಳವಾರ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬದ ಸಂಭ್ರಮದಿಂದ ಸಿಕ್ಕಿ ರೆಡ್ಡಿ ದೂರವೇ ಉಳಿದರೂ ಅವರಿಗೆ ಸರ್‌ಪ್ರೈಸ್‌ವೊಂದು ಕಾದಿತ್ತು. ಸಿಕ್ಕಿ ಸ್ನೇಹಿತೆಯೊಬ್ಬರು, ಅವರ ಕುಟುಂಬ ಸದಸ್ಯರಿಂದ ಹಿಡಿದು ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರತಿಯೊಬ್ಬರಿಂದಲೂ ಹುಟ್ಟುಹಬ್ಬದ ಶುಭಾಶಯ ಹೇಳಿಸಿ ವಿಡಿಯೋ ಮಾಡಿದ್ದಾರೆ. ಸುಮಾರು 3 ನಿಮಿಷ 23 ಸೆಕೆಂಡ್‌ಗಳ ಕಾಲ ಇರುವ ಈ ವಿಡಿಯೋವನ್ನು ಸ್ವತಃ ಸಿಕ್ಕಿ ರೆಡ್ಡಿ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಧೋನಿಗೆ ಭಾರತರತ್ನ ನೀಡಬೇಕೆಂದ ಕಾಂಗ್ರೆಸ್ ಶಾಸಕ
ಸಿಕ್ಕಿ ರೆಡ್ಡಿ ಆತ್ಮೀಯ ಸ್ನೇಹಿತೆ ಹಾಗೂ ಡಬಲ್ಸ್ ಪಾರ್ಟ್‌ನರ್ ಕನ್ನಡತಿ ಅಶ್ವಿನಿ ಪೊನ್ನಪ್ಪ, ಸಿಕ್ಕಿ ತಂದೆ-ತಾಯಿ, ಪ್ರಣವ್ ಚೋಪ್ರಾ, ಕಶ್ಯಪ್, ಗುರುಸಾಯಿದತ್ ಸೇರಿದಂತೆ ಹಲವು ಷಟ್ಲರ್‌ಗಳು ವಿಷ್ ಮಾಡಿದ್ದಾರೆ. ರಾಷ್ಟ್ರೀಯ ತರಬೇತಿ ಶಿಬಿರದಲ್ಲಿದ್ದ ವೇಳೆ ಸಿಕ್ಕಿ ರೆಡ್ಡಿಗೆ ಕೋವಿಡ್-19 ಕಾಣಿಸಿಕೊಂಡಿತ್ತು. ಇದರಿಂದ ತರಬೇತಿ ಶಿಬಿರವನ್ನು ಸ್ಥಗಿತಗೊಳಿಸಲಾಗಿತ್ತು. ಸಿಕ್ಕಿ ರೆಡ್ಡಿ ಪತಿ ಸಮೀತ್ ರೆಡ್ಡಿ ಕೂಡ ಬ್ಯಾಡ್ಮಿಂಟನ್ ಪಟುವಾಗಿದ್ದಾರೆ.
ಸಿಕ್ಕಿ ರೆಡ್ಡಿ 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ವರ್ಣ ಗೆದ್ದ ಮಿಶ್ರ ತಂಡ ಹಾಗೂ ಬೆಳ್ಳಿ ಗೆದ್ದ ಮಹಿಳಾ ತಂಡದ ಸದಸ್ಯೆಯಾಗಿದ್ದರು.