

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಕಾಂಗರೂ ಪಡೆಯ ಪ್ರಮುಖರಿಗೆ ಡಗೌಟ್ ದಾರಿ ತೋರುವಲ್ಲಿ ಯಶಸ್ವಿಯಾಗಿದ್ಧಾರೆ.
ಅಪಾಯಕಾರಿ ಎನಿಸಿದ್ದ ಟ್ರಾವಿಸ್ ಹೆಡ್ರನ್ನು ಔಟ್ ಮಾಡುವ ಮೂಲಕ ಟೀಮ್ ಇಂಡಿಯಾ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದು, ಎದುರಾಳಿಗಳ ಮೇಲೆ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಪಡೆಯಿತು. ಮೂರನೇ ಓವರ್ ನಲ್ಲೇ ಕೂಪರ್ ಕಾನೋಲಿ ವಿಕೆಟ್ ಪಡೆದು ಆಸ್ಟ್ರೇಲಿಯಾಗೆ ಮೊದಲ ಆಘಾತ ನೀಡಿದರು. ಆದರೆ ನಂತರ ಟ್ರಾವಿಸ್ ಹೆಡ್ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಚೇತರಿಕೆ ತಂದುಕೊಟ್ಟರು.
33 ಎಸೆತಗಳಲ್ಲೇ 2 ಸಿಕ್ಸರ್ 5 ಬೌಂಡರಿ ಜೊತೆಗೆ 39 ರನ್ ಪೇರಿಸಿದ್ದ ಟ್ರಾವಿಸ್ ಹೆಡ್ ಅವರನ್ನು ವರುಣ್ ಚಕ್ರವರ್ತಿ ಮೊದಲ ಓವರ್ನ ಎರಡನೇ ಎಸೆತದಲ್ಲೇ ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಟಲ್ ಆಗಿದ್ದ ಟ್ರಾವಿಸ್ ಹೆಡ್ ಔಟಾಗುತ್ತಿದ್ದಂತೆ ತಂಡದಲ್ಲಿ ಸಂಭ್ರಮ ಮನೆ ಮಾಡಿತು. ಆದರೆ, ಅಂಪೈರ್ಗಳು ಶುಭಮನ್ ಗಿಲ್ಗೆ ಎಚ್ಚರಿಕೆ ನೀಡಿದ್ದಾರೆ.
ವರುಣ್ ಚಕ್ರವರ್ತಿ ಎಸೆತವನ್ನು ಅಂದಾಜಿಸುವಲ್ಲಿ ಎಡವಿದ ಟ್ರಾವಿಸ್ ಹೆಡ್ ಶುಭಮನ್ ಗಿಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕ್ಯಾಚ್ ಹಿಡಿದ ಬಳಿಕ ಚೆಂಡು ನೆಲಕ್ಕೆ ತಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಅಂಪೈರ್ ಮುಂದಾಗಿದ್ದರು. ಆದರೆ, ಶುಭಮನ್ ಗಿಲ್ ಅಂಪೈರ್ ಪರಿಶೀಲಿಸುವುದಕ್ಕೂ ಮುನ್ನ ಸಂಭ್ರಮಿಸಿದ ಕಾರಣ ಎಂಸಿಸಿ ನಿಯಮದ ಪ್ರಕಾರ ಎಚ್ಚರಿಕೆ ನೀಡಿದ್ದಾರೆ.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (WK), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.
ಆಸ್ಟ್ರೇಲಿಯಾ: ಕೂಪರ್ ಕೊನೊಲಿ, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ಕ್ಯಾಪ್ಟನ್), ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಾಕ್), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್ವೆಲ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ತನ್ವೀರ್ ಸಂಘ.