ಮದುವೆಯಾದ ಬಳಿಕ ಮಾಜಿ ಪ್ರಿಯಕರನ ಮಾರಣಾಂತಿಕ ಹಲ್ಲೆ; ಅಷ್ಟಕ್ಕೂ ಮಾಜಿ ಪ್ರೇಯಸಿ ಕಾರು ಹತ್ತಿಸಿ ಚಾಕುವಿನಿಂದ ಇರಿದಿದ್ದೇಕೆ?

Assault Case
Published on

ಅಹಮದಾಬಾದ್​: ತನ್ನ ಕರೆಗಳಿಗೆ ಉತ್ತರಿಸದಿದ್ದಕ್ಕೆ ಕೋಪಗೊಂಡು ಮಹಿಳೆಯೊಬ್ಬರು ತನ್ನ ಮಾಜಿ ಪ್ರಿಯಕರನ (Ex-Lover) ಮೇಲೆ ಕಾರು ಹತ್ತಿಸಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಯು ಅಹಮದಾಬಾದಿನ ಶೆಲಾ ಪ್ರದೇಶದಲ್ಲಿ ನಡೆದಿದ್ದು, ಸಂತ್ರಸ್ತನನ್ನು ಜಯ್​ಕುಮಾರ್ ಪಟೇಲ್ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಯನ್ನು ರಿಂಕು (Ex-Lover) ಎಂದು ಗುರುತಿಸಲಾಗಿದೆ. ಮಾರಣಾಂತಿಕ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಾದ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಆಲ್ಟೋ ಕಾರಿನಲ್ಲಿ ಸಂತ್ರಸ್ತನನ್ನು ಸುಮಾರು ದೂರದಿಂದ ವೇಗವಾಗಿ ಚೇಸ್​ ಮಾಡಿಕೊಂಡು ಬರುವ ಮಹಿಳೆ ಬೈಕಿಗೆ ಗುದ್ದಿ ಆತನನ್ನು ಕೆಳಗೆ ಬೀಳಿಸುತ್ತಾಳೆ. ಬಳಿಕ ಆತನ ಮೇಲೆ ಹಲ್ಲೆ ನಡೆಸಿದ್ದು, ಚಾಕುವಿನಿಂದ ಇರಿದು ಪರಾರಿಯಾಗಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.

ಪ್ರಕರಣದ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ರಿಂಕು (Ex-Lover) ಹಾಗೂ ಸಂತ್ರಸ್ತ ಜಯ್​ಕುಮಾರ್ 13 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಇಬ್ಬರು ದೂರಾಗಿದ್ದರು. ದೂರಾದ ಬಳಿಕ ರಿಂಕು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾದ ಬಳಿಕವೂ ಇವರಿಬ್ಬರು ಸಂಪರ್ಕದಲ್ಲಿದ್ದರು.

ಕೆಲ ದಿನಗಳಿಂದ ರಿಂಕು ಕರೆಗಳನ್ನು ಜಯ್​ಪಟೇಲ್​ ಸ್ವೀಕರಿಸಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರಿಂಕು ಜಯ್ ಮೇಲೆ ಕಾರು ಹತ್ತಿಸಿ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಸಂತ್ರಸ್ತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net