ಏಕದಿನ ನಾಯಕತ್ವದಿಂದ ರೋಹಿತ್​ಗೆ ಶೀಘ್ರವೇ ಗೇಟ್​ಪಾಸ್​! ಶುಭಮನ್ ಗಿಲ್​ಗೆ ಸ್ಥಾನ? ಹೀಗಿದೆ ವರದಿ | ODI Captain

ವಿಜಯವಾಣಿ (43)
Published on

ODI Captain: ಇದೇ ಸೆ.09ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್​ ಟಿ20 ಟೂರ್ನಿಗೆ ಭಾರತ ತಂಡ ಸನ್ನದ್ಧವಾಗಿದೆ. ಸೂರ್ಯಕುಮಾರ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ, ತಮ್ಮ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಗೆದ್ದು ಬೀಗಲು ಎದುರುನೋಡುತ್ತಿದೆ. ಈ ಮಧ್ಯೆ ಮತ್ತೊಮ್ಮೆ ಏಕದಿನ ನಾಯಕತ್ವದ ವಿಚಾರ ಮುನ್ನೆಲೆಗೆ ಬಂದಿದ್ದು, ಶೀಘ್ರವೇ ಕ್ಯಾಪ್ಟನ್​ ಸ್ಥಾನದಿಂದ ರೋಹಿತ್ ಶರ್ಮ ಕೆಳಗಿಳಿಯಲಿದ್ದಾರೆ ಎನ್ನಲಾಗಿದೆ.

ಕ್ರಿಕೆಟ್ ವರದಿಗಳ ಪ್ರಕಾರ, ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡದ ಉಪನಾಯಕನಾಗಿ ಶುಭಮನ್ ಗಿಲ್​ ಆಯ್ಕೆಯಾಗಿರುವುದು ಸದ್ಯ ಏಕದಿನ ಕ್ಯಾಪ್ಟನ್ ರೋಹಿತ್ ಶರ್ಮ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿದೆ. ಕಳೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ನಲ್ಲಿ ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ ಗಿಲ್​, ಟೀಮ್ ಇಂಡಿಯಾವನ್ನು 2-2 ಸಮಬಲಗೊಳಿಸುವಲ್ಲಿ ಉತ್ತಮ ನಾಯಕತ್ವ ವಹಿಸಿದ್ದು ಹಲವರ ಮೆಚ್ಚುಗೆಗೆ ಕಾರಣವಾಯಿತು. ಈಗ ಟಿ20 ಟೂರ್ನಿಗೆ ಮರಳಿರುವುದು ರೋಹಿತ್​ ನಾಯಕತ್ವಕ್ಕೆ ಕುತ್ತು ತಂದಿದೆ ಎಂಬ ಚರ್ಚೆಗಳು ಸದ್ಯ ಕ್ರಿಕೆಟ್​ ವಲಯದಲ್ಲಿ ನಡೆಯುತ್ತಿವೆ.

2027ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಆಯ್ಕೆ ಸಮಿತಿಯು ಹೊಸ ನಾಯಕನಿಗೆ ಮಣೆ ಹಾಕಲು ಸಜ್ಜಾಗಿದೆ ಎಂದು ಒಂದಷ್ಟು ಸುದ್ದಿಗಳು ಚರ್ಚೆ ಹುಟ್ಟುಹಾಕಿವೆ. 'ರೇವ್​ ಸ್ಪೋರ್ಟ್ಸ್'​ ವರದಿ ಪ್ರಕಾರ, ಪ್ರಸ್ತುತ, ಏಕದಿನ ಫಾರ್ಮೆಟ್​ಗೆ ಟೀಮ್ ಇಂಡಿಯಾ ನಾಯಕ ಸ್ಥಾನಕ್ಕೆ ಶುಭಮನ್ ಗಿಲ್​ ಅವರ ಆಯ್ಕೆ ವಿಚಾರ ಪ್ರಸ್ತಾಪವಾಗಿಲ್ಲ. ಎಲ್ಲದಕ್ಕೂ ಅಧಿಕೃತ ಘೋಷಣೆ ಅನ್ನೋದು ಇದೆ. 50 ಓವರ್​ಗಳ ಟೂರ್ನಿ ಆಡಲು ರೋಹಿತ್ ಆಸಕ್ತರಾಗಿದ್ದು, 2027ರ ಏಕದಿನ ವಿಶ್ವಕಪ್​ ಗೆಲ್ಲುವ ಬಯಕೆಯಲ್ಲಿದ್ದಾರೆ. ಆದರೆ, ಆಟವನ್ನು ಮುಂದುವರಿಸುವುದು ಅಥವಾ ಬಿಡುವುದು ಅವರ ಕೈಯಲ್ಲಿದೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net