

Shubman Gill : ಭಾರತೀಯ ಕ್ರಿಕೆಟ್ ಸದ್ಯ ಬದಲಾವಣೆಯ ಹಂತದಲ್ಲಿದೆ. ಹಳೆ ತಲೆಮಾರಿನಿಂದ ಹೊಸ ತಲೆಮಾರಿಗೆ ಟೀಮ್ ಇಂಡಿಯಾ ಅಪ್ಡೇಟ್ ಆಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಸೇರಿದಂತೆ ಅನೇಕ ಹಿರಿಯ ಆಟಗಾರರು ಮತ್ತು ಮಾಜಿ ನಾಯಕರು ಈಗಾಗಲೇ ಟೆಸ್ಟ್ ಮತ್ತು ಟಿ20 ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ.
ಸದ್ಯ ರೋಕೋ ಜೋಡಿ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ರೋಹಿತ್ ಶರ್ಮ ಏಕದಿನ ಪಂದ್ಯಗಳಲ್ಲಿ ಆಡುವುದನ್ನು ಮುಂದುವರಿಸುತ್ತಾರೆ ಆದರೆ, ಒಂದು ಬದಲಾವಣೆ. ಅದೇನೆಂದರೆ, ಇನ್ನು ಮುಂದೆ ಏಕದಿನ ಪಂದ್ಯವನ್ನು ಶುಭಮಾನ್ ಗಿಲ್ ಮುನ್ನಡೆಸಲಿದ್ದಾರೆ.
ಟೆಸ್ಟ್ ಕ್ರಿಕೆಟ್ ನಂತರ, ಶುಭಮಾನ್ ಗಿಲ್ ಏಕದಿನ ಕ್ರಿಕೆಟ್ನಲ್ಲೂ ರೋಹಿತ್ ಅವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮ ನೇತೃತ್ವದಲ್ಲಿ ಭಾರತ 2027ರ ಏಕದಿನ ವಿಶ್ವಕಪ್ನಲ್ಲಿ ಆಡುತ್ತದೆ ಮತ್ತು ಅಹಮದಾಬಾದ್ನಲ್ಲಿ ಕಳೆದುಕೊಂಡ ಪ್ರಶಸ್ತಿಯನ್ನು ಮರಳಿ ಪಡೆಯುತ್ತದೆ ಎಂದು ಅಭಿಮಾನಿಗಳು ವಿಶ್ವಾಸ ಹೊಂದಿದ್ದರು. ಆದರೆ, ರೋಹಿತ್ ಶರ್ಮ ನಾಯಕತ್ವ ಕಳೆದುಕೊಂಡಿದ್ದಾರೆ. ಇದನ್ನು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ವಿಶ್ವಕಪ್ವರೆಗೆ ರೋಹಿತ್ ತಂಡದಲ್ಲಿ ಇರುತ್ತಾರೋ? ಇಲ್ಲವೋ? ಎಂಬುದೇ ಅನುಮಾನವಾಗಿದೆ.
ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಶುಭಮಾನ್ ಗಿಲ್ ಅವರು ರೋಹಿತ್ ಶರ್ಮ ಮತ್ತು ಎಂಎಸ್ ಧೋನಿ ಅವರ ಹೆಜ್ಜೆಗಳನ್ನು ಅನುಸರಿಸಿ ಭಾರತಕ್ಕೆ ಐಸಿಸಿ ಪ್ರಶಸ್ತಿ ಮತ್ತು ವಿಶ್ವಕಪ್ ತರುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯ ಪ್ರಮುಖ ಅಂಶವೆಂದರೆ ಶುಭಮಾನ್ ಗಿಲ್ ನಾಯಕತ್ವ.
ಹೌದು, ಅಂಡರ್ -19 ತಂಡದ ಬಳಿಕ ಬಂದ ಅನೇಕ ನಾಯಕರು ಭಾರತೀಯ ತಂಡದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ನಾಯಕನಾಗಿ ಕೊಹ್ಲಿ ತಮ್ಮ ಹೆಸರಿಗೆ ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಕಳೆದ ಐದು ಐಸಿಸಿ ಪ್ರಶಸ್ತಿಗಳಲ್ಲಿ ಮೂರು ಪ್ರಶಸ್ತಿಗಳನ್ನು ಎಂಎಸ್ ಧೋನಿ ಭಾರತಕ್ಕೆ ಗೆದ್ದುಕೊಟ್ಟಿದ್ದಾರೆ. ಅವುಗಳಲ್ಲಿ ಎರಡು ರೋಹಿತ್ ಶರ್ಮ ನೇತೃತ್ವದಲ್ಲಿದೆ. ಈ ಇಬ್ಬರೂ ಭಾರತದ ಅಂಡರ್ -19 ತಂಡಗಳನ್ನು ಎಂದಿಗೂ ಮುನ್ನಡೆಸಿಲ್ಲ. ಅದೇ ರೀತಿ, ಶುಭಮಾನ್ ಗಿಲ್ ಅಂಡರ್ -19 ತಂಡವನ್ನು ಎಂದಿಗೂ ಮುನ್ನಡೆಸಿಲ್ಲ. ಈ ಕಾರಣದಿಂದ ಶುಭಮಾನ್ ಗಿಲ್ ಅವರು ಧೋನಿ ಮತ್ತು ರೋಹಿತ್ ಮಾರ್ಗವನ್ನು ಅನುಸರಿಸಲಿದ್ದಾರೆ ಮತ್ತು ಭಾರತಕ್ಕೆ ವಿಶ್ವಕಪ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆಲ್ಲುತ್ತಾರೆ ಎಂದು ಅಭಿಮಾನಿಗಳು ನಂಬಿದ್ದಾರೆ. ಇದು ನಿಜವಾಗುತ್ತಾ? ಇಲ್ಲವಾ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್)