

Virender Sehwag : ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಅವರು ಇತ್ತೀಚೆಗಷ್ಟೇ ಬಿಸಿಸಿಐನ ಹೊಸ ಅಧ್ಯಕ್ಷರಾಗಿ ನೇಮಕವಾಗಿದ್ದು ಗೊತ್ತೇ ಇದೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರೋಜನ್ ಬಿನ್ನಿ ಅವರ ನಂತರ ಮನ್ಹಾಸ್ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ದೇಶಿಯ ಕ್ರಿಕೆಟ್ನ ಅತ್ಯುನ್ನತ ಸ್ಥಾನಕ್ಕೇರಿದ ಬೆನ್ನಲ್ಲೇ ಮಿಥುನ್ ಅವರ ಹೆಸರು ಕ್ರಿಕೆಟ್ ಹೊರತಾಗಿ ಬೇರೆ ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಅದೇನೆಂದರೆ, ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಅಹ್ಲಾವತ್ ಅವರ ಜತೆ ಮಿಥುನ್ ಅವರಿಗೆ ವಿವಾಹೇತರ ಸಂಬಂಧ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೆಹ್ವಾಗ್ ಮತ್ತು ಆರತಿ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರು ಶೀಘ್ರವೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯೇ ಸುದ್ದಿಯಾಯಿತು. ಈಗಾಗಲೇ ಇಬ್ಬರು ಬೇರೆ ಬೇರೆ ವಾಸಿಸುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಯಾವಾಗ ಅವರಿಬ್ಬರು ತಮ್ಮ ತಮ್ಮ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ರೋ ಆಗಲೇ ವದಂತಿಗಳು ಹಬ್ಬಿದವು. ಅದಕ್ಕೆ ಪುಷ್ಠಿ ನೀಡುವಂತಹ ಘಟನೆಗಳು ಸಹ ನಡೆದಿವೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಹ್ವಾಗ್ ಅವರು ಹಂಚಿಕೊಳ್ಳುತ್ತಿರುವ ಪೋಸ್ಟ್ಗಳಲ್ಲಿ ಪತ್ನಿ ಆರತಿ ಎಲ್ಲಿಯೂ ಕಂಡುಬಂದಿಲ್ಲ. ಜತೆಗೆ ಕಳೆದ ವರ್ಷ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಸೆಹ್ವಾಗ್, ಇಬ್ಬರು ಪುತ್ರರು ಮತ್ತು ತಾಯಿಯೊಂದಿಗಿನ ಫೋಟೋಗಳನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವಿಚ್ಛೇದನ ವರದಿಗೆ ಪುಷ್ಟಿ ನೀಡಿತ್ತು. ಆದರೆ, ವಿಚ್ಛೇದನದ ಬಗ್ಗೆ ವಿರೂ ಆಗಲಿ ಅಥವಾ ಆರತಿ ಆಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಅಂದಹಾಗೆ, ಮಿಥುನ್ ಮನ್ಹಾಸ್ ಮತ್ತು ಆರತಿ ಅಹ್ಲಾವತ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ಜಾಲತಾಣದಲ್ಲಂತೂ ಸಿಕ್ಕಾಪಟ್ಟೆ ಈ ಸುದ್ದಿ ಚರ್ಚೆಯಾಗುತ್ತಿದೆ. ಇದರ ಮಧ್ಯೆ, ಬಿಸಿಸಿಐನ ನೂತನ ಅಧ್ಯಕ್ಷರು ಆರತಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿರುವ ವಿಡಿಯೋ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ, ಈ ಪೋಸ್ಟ್ 2021ರ ಡಿಸೆಂಬರ್ನಲ್ಲಿ ಪೋಸ್ಟ್ ಮಾಡಿದ್ದು. ಇಬ್ಬರ ನಡುವಿನ ಸಂಬಂಧ ವಿಷಯ ಚರ್ಚೆಯಾಗುತ್ತಿರುವುದರ ನಡುವೆ ಈ ಪೋಸ್ಟ್ ಮತ್ತೆ ವೈರಲ್ ಆಗಿದೆ. ವಿಡಿಯೋದಲ್ಲಿ ಮಿಥುನ್ ಜೊತೆ ಆರತಿ ಕೂಡ ಇದಾರೆ.
ಯಾವಾಗ ಮಿಥುನ್ ಮತ್ತು ಆರತಿ ಅಫೇರ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತೋ ನೆಟ್ಟಿಗರು ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಉಲ್ಲೇಖಿಸಿ ಟ್ರೋಲ್ ಮಾಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ, ಕಾರ್ತಿಕ್ ಅವರ ಮೊದಲ ಪತ್ನಿಯ ಜೊತೆ ಮುರಳಿ ವಿಜಯ್ಗೆ ಸಂಬಂಧ ಇತ್ತು. ಇದೇ ಕಾರಣಕ್ಕೆ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿತು. ಮುರಳಿ ಅವರು ಕಾರ್ತಿಕ್ ಪತ್ನಿಯನ್ನು ಮದುವೆ ಸಹ ಆಗಿದ್ದಾರೆ. ಅದೇ ರೀತಿ ಮಿಥುನ್ ಮತ್ತು ಸೆಹ್ವಾಗ್ ಕೂಡ ಸ್ನೇಹಿತರು. ಇದೀಗ ಮಿಥುನ್ ಮತ್ತು ಆರತಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಇದು ಕೇವಲ ವದಂತಿಯಷ್ಟೇ. ಈ ಬಗ್ಗೆ ಸಂಬಂಧಪಟ್ಟವರು ಏನಾದರೂ ಸ್ಪಷ್ಟನೆ ನೀಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದ ಸೆಹ್ವಾಗ್ ಮತ್ತು ಆರತಿ ಪರಸ್ಪರ ಪ್ರೀತಿಸಿ 2004ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಆರ್ಯವೀರ್, ವೇದಾಂತ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. (ಏಜೆನ್ಸೀಸ್)