ತಾಳ್ಮೆ ಕಳೆದುಕೊಂಡ ಗಿಲ್​, ಅಂಪೈರ್​ ಜೊತೆ ವಾಗ್ವಾದ! ಜಿಟಿ ಕ್ಯಾಪ್ಟನ್​ಗೆ ಸಮಾಧಾನ ಹೇಳಿದ ಸನ್​ರೈಸರ್ಸ್​ ಬ್ಯಾಟರ್ಸ್​ | Shubman Gill

ವಿಜಯವಾಣಿ
Published on

Shubman Gill: ನಿನ್ನೆ (ಮೇ.02) ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟನ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಪಂದ್ಯದಲ್ಲಿ 38 ರನ್​ಗಳಿಂದ ಶುಭಮನ್ ಗಿಲ್​ ಪಡೆ ಗೆದ್ದು ಬೀಗಿತು.

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಉದ್ದೇಶದಲ್ಲಿ ಅಬ್ಬರಿಸಿದ ಗಿಲ್ ಪಡೆ, ಅಂತಿಮವಾಗಿ ಎಸ್​ಆರ್​ಎಚ್​ ವಿರುದ್ಧದ ಗೆಲುವಿನ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಈ ಪಂದ್ಯದಲ್ಲಿಯೂ ಸೋಲು ಅನುಭವಿಸಿದ ಸನ್​ರೈಸರ್ಸ್​ಗೆ ಐಪಿಎಲ್​ ಪ್ಲೇಆಫ್​ ಕನಸು ಕಡೆಗೂ ಭಗ್ನಗೊಂಡಿದೆ.

225 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ಎಸ್​ಆರ್​ಎಚ್​ ಬ್ಯಾಟಿಂಗ್ ವೇಳೆ ಡಿಆರ್​ಎಸ್​ಗೆ ಮನವಿ ಮಾಡಿದ ಜಿಟಿ ಕ್ಯಾಪ್ಟನ್​ ಶುಭ್‌ಮನ್ ಗಿಲ್, ಡಿಆರ್‌ಎಸ್ ನಿರ್ಧಾರ ಕುರಿತಂತೆ ಮೈದಾನದಲ್ಲಿದ್ದ ಅಂಪೈರ್​ಗಳೊಂದಿಗೆ ಬಿಸಿ ಬಿಸಿ ಮಾತುಕತೆಗೆ ಇಳಿದರು. ಈ ಮಾತಿನ ಜಟಾಪಟಿಗೂ ಮುನ್ನ ಗಿಲ್ ತಮ್ಮ ಔಟ್ ಬಗ್ಗೆ ಅಂಪೈರ್ ಜೊತೆ ತೀವ್ರ ವಾಗ್ವಾದ ನಡೆಸಿದ್ದರು. ಎಸ್‌ಆರ್‌ಎಚ್ ಇನ್ನಿಂಗ್ಸ್ ಸಮಯದಲ್ಲಿ, ಅಭಿಷೇಕ್ ಶರ್ಮ ಔಟ್​ ಕುರಿತಾಗಿ ಡಿಆರ್‌ಎಸ್ ಕೇಳಲಾಯಿತು. ಈ ವಿಚಾರದಲ್ಲಿ ಕ್ಯಾಪ್ಟನ್​ ಮತ್ತು ಅಂಪೈರ್​ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತು.

ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ, ಬ್ಯಾಟಿಂಗ್ ಮಾಡುತ್ತಿದ್ದ ಅಭಿಷೇಕ್ ಶೂಗೆ ಯಾರ್ಕರ್ ಬಡಿದ ಹಿನ್ನೆಲೆ ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ಎಂದು ಘೋಷಿಸಲಿಲ್ಲ. ಈ ವೇಳೆ ಬಂದ ನಿರ್ಣಯದಿಂದ ಅಂಪೈರ್​ ಮೇಲೆ ಸಿಟ್ಟಾದ ಗಿಲ್​, ಕೆಲ ನಿಮಿಷ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು. ಅಂಪೈರ್​-ಗಿಲ್​ ನಡುವಿನ ಮಾತುಕತೆ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಅಭಿಷೇಕ್ ಶರ್ಮ, ಶುಭಮನ್​ಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದರು. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net