

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬೈಸರನ್ನಲ್ಲಿ ನಡೆದಿದ್ದ ನರಮೇಧದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್ಐ) ನ ಕೈವಾಡ ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಯ ತನಿಖೆ ವೇಳೆ ತಿಳಿದು ಬಂದಿದೆ.
ಐಎಸ್ಐನ ಹಿರಿಯ ಅಧಿಕಾರಿಯ ನಿರ್ದೇಶನದ ಮೇರೆಗೆ ಪಾಕಿಸ್ತಾನದಲ್ಲಿರುವ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಸಂಚು ರೂಪಿಸಲಾಗಿತ್ತು. ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ದಾಳಿಯ ಮಾಸ್ಟರ್ವೆುೖಂಡ್ ಆಗಿದ್ದು, ಲಷ್ಕರ್ ನಾಯಕರು ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರಿಗೆ ದಾಳಿಯ ಸಮಯ, ದಾಳಿಯ ವಿಧಾನದ ಕುರಿತು ಸೂಚನೆ ನೀಡುತ್ತಿದ್ದರು ಹಾಗೂ ಕಾಶ್ಮೀರದಲ್ಲಿ ಅವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ದಾಳಿಯ ಬಳಿಕ ಬಂಧನಕ್ಕೆ ಒಳಗಾಗಿರುವ ಕಾಶ್ಮೀರದಲ್ಲಿರುವ ಓವರ್ ಗ್ರೌಂಡ್ ವರ್ಕರ್ಗಳು ನೀಡಿದ ಮಾಹಿತಿಯಂತೆ ಉಗ್ರರು ಪಾಕಿಸ್ತಾನದಲ್ಲಿರುವ ದಾಳಿಯ ಮಾಸ್ಟರ್ವೆುೖಂಡ್ಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅದರಲ್ಲೂ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಾಕಿಸ್ತಾನಿ ಪ್ರಜೆಗಳಾದ ಹಶೀಮ್ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಲಾ ಭಾಯ್ಗೆ ನಿರಂತರವಾಗಿ ನಿರ್ದೇಶನಗಳು ಬರುತ್ತಿತ್ತು ಎಂದು ತಿಳಿದು ಬಂದಿದೆ.
ದಾಳಿಯ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಘಟನಾ ಸ್ಥಳದಿಂದ 40 ಕ್ಕೂ ಹೆಚ್ಚು ಕಾಟ್ರಿಜ್ಗಳನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸುತ್ತಿದ್ದಾರೆ. ಇದೇ ವೇಳೆ ಬೈಸರನ್ ಸುತ್ತಮುತ್ತಲ ಪ್ರದೇಶದ ಮೊಬೈಲ್ ಡಂಪ್, ಸ್ಯಾಟಲೈಟ್ ಫೋನ್ ಬಳಕೆ ಮಾಹಿತಿ, ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ. ಜತೆಗೆ ಇದುವರೆಗೆ 2800ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, 150ಕ್ಕೂ ಹೆಚ್ಚು ಜನರು ಇನ್ನೂ ಎನ್ಐಎ ಕಸ್ಟಡಿಯಲ್ಲಿದ್ದು, ಅವರ ವಿಚಾರಣೆ ಮುಂದುವರೆದಿದೆ.
ನಿಯಮ ಬಾಹಿರವಾಗಿ ಪಾಕಿಸ್ತಾನದ ಮಹಿಳೆಯನ್ನು ಮದುವೆಯಾಗಿರುವ ಸಿಆರ್ಪಿಎಫ್ನ ಕಾನ್ಸ್ಟೆಬಲ್ ಮುನೀರ್ ಅಹಮದ್ ವಿರುದ್ಧ ತನಿಖೆ ಆರಂಭವಾಗಲಿದೆ. 41 ನೇ ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮುನೀರ್ ಪಾಕಿಸ್ತಾನಿ ಮಹಿಳೆಯೊಂದಿಗೆ ವಿವಾಹವಾಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪರಿಶೀಲನೆ ಮುಕ್ತಾಯವಾಗುವ ಮೊದಲೇ ವಾಟ್ಸ್ಅಪ್ ವಿಡಿಯೋ ಕಾಲ್ ಮೂಲಕ 2024 ರ ಮೇ 24 ರಂದು ಮದುವೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ ಉಲ್ಲಂಘಿಸಿದ ಆರೋಪದ ಮೇಲೆ ಆಂತರಿಕ ತನಿಖೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಮೇಲೆ ಭಾರತ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದರೆ ಈಶಾನ್ಯ ರಾಜ್ಯಗಳ ಮೇಲೆ ಬಾಂಗ್ಲಾದೇಶ ದಾಳಿ ಮಾಡಿ ಅದನ್ನು ವಶಕ್ಕೆ ಪಡೆಯಬೇಕು ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಆಪ್ತ ತಿಳಿಸಿದ್ದಾರೆ. ಬಾಂಗ್ಲಾದೇಶ ರೈಫಲ್ಸ್ನ ಮಾಜಿ ಮುಖ್ಯಸ್ಥ ಮೇಜರ್ ಜನರಲ್ (ನಿವೃತ್ತ) ಎಎಲ್ಎಂದ ಫಜುಲ್ ರಹಮಾನ್ ‘ಭಾರತ ಪಾಕ್ ಮೇಲೆ ದಾಳಿ ನಡೆಸಿದರೆ ಬಾಂಗ್ಲಾದೇಶ ಚೀನಾದ ಸಹಾಯದೊಂದಿಗೆ ಭಾರತದ ಈಶಾನ್ಯದಲ್ಲಿರುವ 7 ರಾಜ್ಯಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಬೇಕು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಯೂನುಸ್ ಚೀನಾಗೆ ಭೇಟಿ ನೀಡಿದ್ದರು, ಜತೆಗೆ ಚೀನಾ ಭೇಟಿಯ ಬಳಿಕ ಈಶಾನ್ಯ ರಾಜ್ಯಗಳ ಕುರಿತು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಲಷ್ಕರ್ ಎ ತೊಯ್ಬಾ ಮತ್ತು ಜೈಷ್ಎ ಮೊಹಮ್ಮದ್ ಉಗ್ರ ಸಂಘಟನೆಗಳ ಉಗ್ರರು ಹಾಗೂ ಅವರಿಗೆ ಪಾಕಿಸ್ತಾನದಿಂದ ಸೂಚನೆ ನೀಡುವ ಕಮಾಂಡರ್ಗಳು ಹಾಗೂ ಅವರಿಗೆ ನೆರವು ನೀಡುವವರ ಪಟ್ಟಿಯನ್ನು ಭದ್ರತಾ ಪಡೆಗಳು ಸಿದ್ಧಪಡಿಸಿದ್ದು, ಅವರ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ.
ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ, ತರಬೇತಿ ಮತ್ತು ಹಣಕಾಸಿನ ನೆರವು ಒದಗಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮೊದಲ ಆಫ್ಘನ್ ಯುದ್ಧದ ಸಮಯದಲ್ಲಿ ಪಶ್ಚಿಮದ ರಾಷ್ಟ್ರಗಳ ನೆರವಿನಿಂದ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದ್ದೆವು. ಪಾಕಿಸ್ತಾನ ಇದರ ಪರಿಣಾಮವನ್ನು ಎದುರಿಸಿದೆ. ಇದು ನಮ್ಮ ದೇಶದ ಇತಿಹಾಸದ ದುರದೃಷ್ಟಕರ ಭಾಗವಾಗಿದೆ ಎಂದು ಮಾಜಿ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ತಿಳಿಸಿದ್ದಾರೆ.
ಪಹಲ್ಗಾಮ್ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶೀಘ್ರದಲ್ಲೇ ಸಭೆ ಸೇರುವ ಸಾಧ್ಯತೆ ಇದೆ. ಸಭೆ ನಡೆಸಲು ಮನವಿ ಬಂದರೆ ನಾವು ಸಭೆ ನಡೆಸಲು ಸಿದ್ಧರಿದ್ದೇವೆ. ಸಭೆ ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ರಾಯಭಾರಿ ಇವಾಂಜೆಲೋಸ್ ಸೆಕೆರಿಸ್ ತಿಳಿಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವುದನ್ನು ತಡೆಯಲು ಆರ್ಥಿಕ ದಾಳಿ ನಡೆಸಲು ಭಾರತ ಯೋಜನೆ ರೂಪಿಸುತ್ತಿದೆ. ಇದರ ಭಾಗವಾಗಿ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್)ಯ ಬೂದು ಪಟ್ಟಿಗೆ ಪಾಕಿಸ್ತಾನವನ್ನು ಮತ್ತೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಜತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪಾಕಿಸ್ತಾನಕ್ಕೆ ದೊರೆಯಲಿರುವ 59 ಸಾವಿರ ಕೋಟಿ ರೂ. (7 ಬಿಲಿಯನ್ ಡಾಲರ್) ನೆರವು ಪ್ಯಾಕೇಜ್ ಕುರಿತು ಕಳವಳ ವ್ಯಕ್ತಪಡಿಸಿ ನೆರವು ದೊರೆಯದಂತೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ತಿಳಿದು ಬಂದಿದೆ.