

ನವದೆಹಲಿ: ಪ್ರಸಕ್ತ ಐಪಿಎಲ್ನಲ್ಲಿ ಬ್ಯಾಟ್ಸ್ಮನ್ಗಳು ಬೌಂಡರಿ ಮತ್ತು ಸಿಕ್ಸರ್ಗಳಿಂದ ಧೂಳೆಬ್ಬಿಸುತ್ತಿದ್ದಾರೆ. ಇದನ್ನು ನೋಡಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಚಪ್ಪಾಳೆ ಹಾಗೂ ಶಿಳ್ಳೆಗಳೊಂದಿಗೆ ಕಿರುಚುತ್ತಾ ಸಂಭ್ರಮಿಸುತ್ತಾರೆ. ಇದರ ನಡುವೆ ಕ್ಯಾಮರಾಮನ್ಗಳು ಸುಂದರ ಹುಡುಗಿಯರನ್ನು ಸೆರೆಹಿಡಿಯುವ ಮೂಲಕ ತಮ್ಮ ಕೈಚಳಕವನ್ನು ತೋರಿಸುತ್ತಲೇ ಇರುತ್ತಾರೆ. ಪಂದ್ಯವನ್ನು ಸೆರೆಹಿಡಿಯುವುದರ ಜತೆಗೆ ಒಂದು ಕಡೆ ಮುದ್ದು ಮುಗದ ಚೆಲುವೆಯರನ್ನು ದೊಡ್ಡ ಪರದೆಯ ಮೇಲೆ ತೋರಿಸುವ ಮೂಲಕ ಆಟಕ್ಕೆ ಮತ್ತಷ್ಟು ರಂಗು ಚೆಲ್ಲುತ್ತಾರೆ. ಹೀಗೆ ಕ್ಯಾಮೆರಾಮ್ಯಾನ್ಗಳು ಸೆರೆಹಿಡಿಯುವ ಯುವತಿಯರು ಒಮ್ಮೊಮ್ಮೆ ಭಾರಿ ವೈರಲ್ ಆಗುತ್ತಾರೆ. ಆದರೆ, ಈ ಬಾರಿ ವೈರಲ್ ಆಗಿರುವ ವಿಡಿಯೋ ವಿಶೇಷ ಕಾರಣದಿಂದ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.
ಟೀಮ್ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಬ್ಯಾಟಿಂಗ್ನಲ್ಲಿ ಮಿಂಚುತ್ತಿರುವ ಗಿಲ್, ನಾಯಕನಾಗಿ ಕೊಂಚ ಒತ್ತಡ ಎದುರಿಸುತ್ತಿದ್ದಾರೆ. ಈ ಸೀಸನ್ನ ಆರಂಭದಲ್ಲಿ ಉತ್ತಮ ಗೆಲುವು ಸಾಧಿಸಿರುವ ಗುಜರಾತ್ ಇದೀಗ ತನ್ನ ಫಾರ್ಮ್ ಕಳೆದುಕೊಳ್ಳುತ್ತಾ ಬರುತ್ತಿದೆ. ಸೋಲುಗಳಿಂದ ತಂಡ ದುರ್ಬಲಗೊಳ್ಳುತ್ತಿದೆ. ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ 17.3 ಓವರ್ಗಳಲ್ಲಿ ಕೇವಲ 89 ರನ್ ಗಳಿಸಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ 8.5 ಓವರ್ಗಳಲ್ಲೇ ಗುರಿ ಮುಟ್ಟುವ ಮೂಲಕ 6 ವಿಕೆಟ್ಗಳಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ಗುಜರಾತ್ ಬ್ಯಾಟ್ಸ್ಮನ್ಗಳು ಸಂಪೂರ್ಣ ವಿಫಲವಾದರು. ಹೀಗಾಗಿ ಗುಜರಾತ್ಗೆ ಸೋಲಾಯಿತು.
ಸದ್ಯ ಇದೆಲ್ಲವನ್ನು ಬದಿಗಿಡಿ. ಈ ಪಂದ್ಯವು ಕುತೂಹಲಕಾರಿ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಕ್ಯಾಮರಾಮನ್ ತನ್ನ ಲೆನ್ಸ್ ಅನ್ನು ಸುಂದರ ಹುಡುಗಿಯ ಮೇಲೆ ಕೇಂದ್ರೀಕರಿಸಿದನು. ಈ ವೇಳೆ ಯುವತಿಯು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿರುವುದು ದೊಡ್ಡ ಪರದೆಯ ಮೇಲೆ ಗೋಚರವಾಯಿತು. ಆ ಹುಡುಗಿಯನ್ನು ನೋಡಿ ಶುಭಮನ್ ಗಿಲ್ ಕೊಟ್ಟ ಪ್ರತಿಕ್ರಿಯೆ ವೈರಲ್ ಆಗಿದೆ.
ಅಬ್ಬಾ ಎಷ್ಟು ಚೆನ್ನಾಗಿದ್ದಾಳೆ ಅಂತಾ ಗಿಲ್ ಮನಸ್ಸಿನಲ್ಲೇ ಹೇಳಿಕೊಂಡಂತಿತ್ತು ಅವರ ಮುಖಭಾವ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ನೆಟ್ಟಿಗರು ನಾನಾ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕ್ಯಾಮೆರಾಮನ್ನ ಕಾರ್ಯವನ್ನು ಶ್ಲಾಘಿಸುತ್ತಲೇ ಕೆಲವರು ಗಿಲ್ ಕಾಲೆಳೆದಿದ್ದಾರೆ. ಈ ವಿಡಿಯೋವನ್ನು ಸಾರಾ ನೋಡಿದ್ರೆ ಬೇಜಾರು ಮಾಡಿಕೊಳ್ಳುವುದು ಖಚಿತ ಎನ್ನುತ್ತಿದ್ದಾರೆ. ನೀನು ಸಾಮಾನ್ಯ ಅಲ್ಲ ಗಿಲ್ ಬ್ರೋ ಎಂದು ಇತರರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)