ಇಂದಿನಿಂದ ರಣಜಿ ಸೆಮಿಫೈನಲ್​; ಮುಂಬೈ-ತಮಿಳುನಾಡು, ವಿದರ್ಭ-ಮಧ್ಯಪ್ರದೇಶ ಮುಖಾಮುಖಿ

ranji web
Published on

ಮುಂಬೈ/ನಾಗ್ಪುರ: ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ಸೆಮಿಫೈನಲ್​ ಪಂದ್ಯಗಳು ಶನಿವಾರದಿಂದ 5 ದಿನಗಳ ಕಾಲ ನಡೆಯಲಿವೆ. 41 ಬಾರಿಯ ಚಾಂಪಿಯನ್​ ಮುಂಬೈ ತಂಡ ದಕ್ಷಿಣ ಭಾರತದ ಬಲಿಷ್ಠ ತಂಡ ತಮಿಳುನಾಡು ವಿರುದ್ಧ ಸೆಣಸಲಿದ್ದು, ಇದು ಫೈನಲ್​ನಷ್ಟೇ ಮಹತ್ವ ಹೊಂದಿರುವ ಮುಖಾಮುಖಿ ಎನಿಸಿದೆ. ನಾಗ್ಪುರದಲ್ಲಿ ನಡೆಯಲಿರುವ ಇನ್ನೊಂದು ಉಪಾಂತ್ಯ ಕಾದಾಟದಲ್ಲಿ ವಿದರ್ಭ ಮತ್ತು ಮಧ್ಯಪ್ರದೇಶ ತಂಡಗಳು ಎದುರಾಗಲಿವೆ.

ಬಿಸಿಸಿಐ ಸೂಚನೆಯ ನಡುವೆಯೂ ರಣಜಿಯಲ್ಲಿ ಆಡದೆ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿರುವ ಮುಂಬೈ ಬ್ಯಾಟರ್​ ಶ್ರೇಯಸ್​ ಅಯ್ಯರ್​, ಇದೀಗ ಕೊನೆಗೂ ದೇಶೀಯ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ. ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ ಸಾರಥ್ಯದ ಮುಂಬೈ ತಂಡಕ್ಕೆ ಶ್ರೇಯಸ್​ ಬಲ ತುಂಬಲಿದ್ದು, ಗುಣಮಟ್ಟದ ಸ್ಪಿನ್​ ಬೌಲಿಂಗ್​ ವಿಭಾಗವನ್ನು ಹೊಂದಿರುವ ತಮಿಳುನಾಡು ವಿರುದ್ಧದ ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ನಾಯಕ ಸಾಯಿ ಕಿಶೋರ್​ 47 ಮತ್ತು ಎಡಗೈ ಸ್ಪಿನ್ನರ್​ ಅಜಿತ್​ ರಾಮ್​ 41 ವಿಕೆಟ್​ ಕಬಳಿಸಿ ಹಾಲಿ ಋತುವಿನಲ್ಲಿ ತಮಿಳುನಾಡಿನ ಯಶಸ್ಸಿನ ರೂವಾರಿಗಳೆನಿಸಿದ್ದಾರೆ. ಕ್ವಾರ್ಟರ್​ಫೈನಲ್​ನಲ್ಲಿ ಬರೋಡ ವಿರುದ್ಧ ರನ್​ಮಳೆ ಹರಿಸುವ ಮೂಲಕ ಮುಂಬೈ ಗೆದ್ದಿದ್ದರೆ, ತಮಿಳುನಾಡು ತಂಡ ಹಾಲಿ ಚಾಂಪಿಯನ್​ ಸೌರಾಷ್ಟ್ರಕ್ಕೆ ಆಘಾತ ನೀಡಿದೆ.

ವಿದರ್ಭ-ಎಂಪಿ ಫೈಟ್​

ಎರಡು ಬಾರಿಯ ಚಾಂಪಿಯನ್​ ವಿದರ್ಭ ಮತ್ತು 2021&22ರ ಆವೃತ್ತಿಯ ಚಾಂಪಿಯನ್​ ಮಧ್ಯಪ್ರದೇಶ ತಂಡಗಳು ವಿಸಿಎ ಸ್ಟೇಡಿಯಂನಲ್ಲಿ ಮುಖಾಮುಖಿ ಆಗಲಿವೆ. ಕ್ವಾರ್ಟರ್​ಫೈನಲ್​ನಲ್ಲಿ ಕರ್ನಾಟಕ ತಂಡಕ್ಕೆ ಸೋಲುಣಿಸಿರುವ ವಿದರ್ಭ ತಂಡ ಈ ಬಾರಿ ಮತ್ತೆ ತವರಿನಲ್ಲೇ ಆಡುವ ಲಾಭ ಹೊಂದಿದೆ. ಮಧ್ಯಪ್ರದೇಶ ತಂಡ ಆಂಧ್ರ ವಿರುದ್ಧ 4 ರನ್​ಗಳಿಂದ ವೀರೋಚಿತವಾಗಿ ಗೆದ್ದು ಸೆಮಿಫೈನಲ್​ಗೇರಿದೆ. ದೇಶೀಯ ಕ್ರಿಕೆಟ್​ನ ದಿಗ್ಗಜ ಕೋಚ್​ ಚಂದ್ರಕಾಂತ್​ ಪಂಡಿತ್​ ಮಾರ್ಗದರ್ಶನ ಮಧ್ಯಪ್ರದೇಶ ತಂಡದ ಪ್ಲಸ್​ ಪಾಯಿಂಟ್​ ಆಗಿದೆ. ಉಭಯ ತಂಡಗಳೂ ಅನುಭವಿ ಮತ್ತು ಯುವ ಆಟಗಾರರ ಬಲವನ್ನು ಹೊಂದಿವೆ.

*ಶ್ರೇಯಸ್​ ಅಯ್ಯರ್​ ತಂಡವನ್ನು ಕೂಡಿಕೊಂಡಿರುವುದರಿಂದ ಸೆಮಿಫೈನಲ್​ ಪಂದ್ಯಕ್ಕೆ ನಮಗೆ ಹೆಚ್ಚಿನ ಬಲ ಬಂದಿದೆ. ಮುಂಬೈ ತಂಡಕ್ಕೆ ಅವರು ಯಾವಾಗಲೂ ಬ್ಯಾಟಿಂಗ್​ನಲ್ಲಿ ಉತ್ತಮ ಕೊಡುಗೆ ನೀಡುತ್ತ ಬಂದಿದ್ದಾರೆ..

| ಅಜಿಂಕ್ಯ ರಹಾನೆ, ಮುಂಬೈ ನಾಯಕ

ಪಂದ್ಯ ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಜಿಯೋಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net