

ಧರ್ಮಶಾಲಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ 4 ಪಂದ್ಯಗಳಲ್ಲಿ ಈಗಾಗಲೆ ನಾಲ್ವರು ಯುವ ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಇದೀಗ ಸರಣಿಯ 5ನೇ ಹಾಗೂ ಕೊನೇ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಟೆಸ್ಟ್ ಪದಾರ್ಪಣೆಯ ಅವಕಾಶ ಪಡೆಯುವ ನಿರೀಕ್ಷೆ ಹರಡಿದೆ. ಅವರು ಧರ್ಮಶಾಲಾದಲ್ಲಿ ಕಣಕ್ಕಿಳಿದರೆ, ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್ ಆಡಿದ ಕರ್ನಾಟಕದ 25ನೇ ಆಟಗಾರ ಹಾಗೂ ಮೊದಲ ಎಡಗೈ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಮತ್ತೋರ್ವ ಕನ್ನಡಿಗ ಕೆಎಲ್ ರಾಹುಲ್ ಫಿಟ್ನೆಸ್ ಸಮಸ್ಯೆಯಿಂದಾಗಿ ಸರಣಿಯ 3ನೇ ಟೆಸ್ಟ್ನಿಂದ ಹೊರಬಿದ್ದಾಗ ಕೆಎಲ್ ರಾಹುಲ್ ಭಾರತ ತಂಡ ಸೇರಿಕೊಂಡಿದ್ದರು. ಆದರೆ ಕಳೆದೆರಡು ಪಂದ್ಯಗಳಲ್ಲಿ ಬೆಂಚು ಕಾಯಿಸಿದ್ದರು. ಇದೀಗ ಕೊನೆಗೂ ಸರಣಿಯ ಅಂತಿಮ ಟೆಸ್ಟ್ನಲ್ಲಿ ಅವರಿಗೆ ಟೆಸ್ಟ್ ಕ್ಯಾಪ್ ಒಲಿದುಬರುವ ನಿರೀಕ್ಷೆ ಹೆಚ್ಚಾಗಿದೆ.
ಒಂದೆಡೆ ರಜತ್ ಪಾಟೀದಾರ್ ಮಧ್ಯಮ ಕ್ರಮಾಂಕದಲ್ಲಿ ನಿರೀೆಗೆ ತಕ್ಕ ನಿರ್ವಹಣೆ ತೋರಲು ವಿಲರಾಗಿದ್ದಾರೆ. ಕಳೆದ 3 ಟೆಸ್ಟ್ಗಳಲ್ಲಿ ಆಡಿರುವ ಮಧ್ಯಪ್ರದೇಶದ ಬ್ಯಾಟರ್ ರಜತ್ 6 ಇನಿಂಗ್ಸ್ಗಳಲ್ಲಿ ಕೇವಲ 63 ರನ್ ಪೇರಿಸಿದ್ದಾರೆ. ಮತ್ತೊಂದೆಡೆ ಕೆಎಲ್ ರಾಹುಲ್ ಫಿಟ್ನೆಸ್ ಸಮಸ್ಯೆಯಿಂದಾಗಿ ಸರಣಿಯ ಕೊನೇ ಟೆಸ್ಟ್ನಿಂದಲೂ ಹೊರಬಿದ್ದಿದ್ದಾರೆ. ಹೀಗಾಗಿ, ರಜತ್ ಕೊನೇ ಟೆಸ್ಟ್ಗೆ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರೂ, ಆಡುವ 11ರ ಬಳಗದಲ್ಲಿ ಪಡಿಕ್ಕಲ್ಗೆ ಅದೃಷ್ಟ ಒಲಿದುಬರಲಿದೆ ಎನ್ನಲಾಗಿದೆ.
ಕೆಎಲ್ ರಾಹುಲ್ ಒಂದು ವೇಳೆ ಫಿಟ್ ಆಗಿದ್ದರೆ, ರಜತ್ ಪಾಟೀದಾರ್ರನ್ನು ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಮಧ್ಯಪ್ರದೇಶ ಪರ ಆಡಲು ಭಾರತ ತಂಡ ಬಿಟ್ಟುಕೊಡುವ ಸಾಧ್ಯತೆ ಇತ್ತು. ಇದೀಗ ರಾಹುಲ್ ಅಲಭ್ಯತೆಯಿಂದ ರಜತ್ ಭಾರತ ತಂಡದಲ್ಲೇ ಉಳಿಯಲಿದ್ದಾರೆ. ಆದರೆ ಇದು ರಜತ್ಗೆ ಕೊನೇ ಟೆಸ್ಟ್ನಲ್ಲೂ ಆಡುವ ಅವಕಾಶದ ಗ್ಯಾರಂಟಿ ನೀಡುವುದಿಲ್ಲ. ಪ್ರಮುಖವಾಗಿ ಸ್ಪಿನ್ನರ್ಗಳ ವಿರುದ್ಧವೇ ಕೆಟ್ಟ ಹೊಡೆತಗಳನ್ನು ಆಡಿ ಔಟಾಗುತ್ತಿರುವುದು ರಜತ್ಗೆ ಹಿನ್ನಡೆಯಾಗಿದೆ.
23 ವರ್ಷದ ದೇವದತ್ ಪಡಿಕ್ಕಲ್ ಪ್ರಸಕ್ತ ಭರ್ಜರಿ ಫಾರ್ಮ್ನಲ್ಲಿದ್ದು, ರಣಜಿಯಲ್ಲಿ ಕರ್ನಾಟಕ ಪರ ಆಡಿದ 4 ಪಂದ್ಯಗಳಲ್ಲಿ 3 ಶತಕಗಳ ಸಹಿತ 556 ರನ್ ಗಳಿಸಿ ಉತ್ತಮ ಲಯದಲ್ಲಿದ್ದರು. ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಚತುರ್ದಿನ ಟೆಸ್ಟ್ನಲ್ಲಿ ಶತಕ ಸಿಡಿಸಿದ್ದರು. ಹೀಗಾಗಿ ಐಪಿಎಲ್ಗೆ ಮುನ್ನ ಭಾರತ ತಂಡ ಆಡಲಿರುವ ಕೊನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಡಿಕ್ಕಲ್ಗೆ ಆಡುವ ಅವಕಾಶ ಕಲ್ಪಿಸುವ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
ಇದುವರೆಗೆ 31 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಪಡಿಕ್ಕಲ್ 44.54ರ ಸರಾಸರಿಯಲ್ಲಿ 6 ಶತಕ, 12 ಅರ್ಧಶತಕಗಳ ಸಹಿತ 2,227 ರನ್ ಬಾರಿಸಿದ್ದಾರೆ. ಪಡಿಕ್ಕಲ್ ಗೈರಿನ ನಡುವೆ ಇತ್ತ ಕರ್ನಾಟಕ ತಂಡ ರಣಜಿ ಕ್ವಾರ್ಟರ್ಫೈನಲ್ನಲ್ಲಿ ಮುಗ್ಗರಿಸಿದೆ. ಅತ್ತ ಭಾರತ ತಂಡದಲ್ಲಿ ಬೆಂಚು ಕಾಯಿಸುತ್ತ ಬಂದಿರುವ ಪಡಿಕ್ಕಲ್ "ಇಲ್ಲೂ ಆಡದೆ, ಅಲ್ಲೂ ಆಡಲು ಸಿಗದೆ' ವ್ಯರ್ಥವಾಗಬಾರದು.
ರಾಹುಲ್ ಔಟ್, ಬುಮ್ರಾ ಇನ್
ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಗುರುವಾರ ಭಾರತದ 16 ಆಟಗಾರರ ತಂಡವನ್ನು ಅಂತಿಮಗೊಳಿಸಿದೆ. ಇದರನ್ವಯ ಕನ್ನಡಿಗ ಕೆಎಲ್ ರಾಹುಲ್ ಅಂತಿಮ ಟೆಸ್ಟ್ಗೂ ಅಲಭ್ಯರಾಗಿರುವುದು ಅಧಿಕೃತಗೊಂಡಿದ್ದರೆ, ವೇಗಿ ಜಸ್ಪ್ರೀತ್ ಬುಮ್ರಾ 4ನೇ ಪಂದ್ಯದ ವಿಶ್ರಾಂತಿಯ ಬಳಿಕ ಮತ್ತೆ ತಂಡಕ್ಕೆ ಮರಳಿದ್ದಾರೆ. ರಾಹುಲ್ ಸರಣಿಯ ಮೊದಲ ಟೆಸ್ಟ್ನಲ್ಲಿ ಮಾತ್ರ ಆಡಿದ್ದರು. ಬಳಿಕ ಬಲತೊಡೆಯ ಸ್ನಾಯುನೋವು ಅನುಭವಿಸುತ್ತಿರುವ ರಾಹುಲ್, ಹೆಚ್ಚಿನ ಪರೀಕ್ಷೆಗಾಗಿ ಲಂಡನ್ಗೆ ಪ್ರಯಾಣಿಸಿದ್ದಾರೆ.
5ನೇ ಟೆಸ್ಟ್ಗೆ ಭಾರತ ತಂಡ: ರೋಹಿತ್ ಶರ್ಮ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್, ರಜತ್ ಪಾಟೀದಾರ್, ಸ್ರಾರ್ಜ್ ಖಾನ್, ಧ್ರುವ ಜುರೆಲ್ (ವಿ.ಕೀ), ಕೆಎಸ್ ಭರತ್ (ವಿ.ಕೀ), ದೇವದತ್ ಪಡಿಕ್ಕಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.
ರಣಜಿ ಸೆಮೀಸ್ಗೆ ವಾಷಿಂಗ್ಟನ್
ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ರನ್ನು ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ತಮಿಳುನಾಡು ಪರ ಆಡಲು ಭಾರತ ತಂಡದಿಂದ ಬಿಡುಗಡೆಗೊಳಿಸಲಾಗಿದೆ. ಮಾರ್ಚ್ 2ರಿಂದ ಮುಂಬೈನಲ್ಲಿ ರಣಜಿ ಸೆಮೀಸ್ ನಡೆಯಲಿದ್ದು, ಮಾರ್ಚ್ 6 ಅಥವಾ ಅದಕ್ಕಿಂತ ಮುನ್ನ ಈ ಪಂದ್ಯ ಮುಗಿದ ನಂತರ ಅಗತ್ಯಬಿದ್ದರೆ ವಾಷಿಂಗ್ಟನ್ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.