ನೀರಜ್ ಚೋಪ್ರಾ​ಗೊಬ್ಬ ಪ್ರಬಲ ಪ್ರತಿಸ್ಪರ್ಧಿ ಸಿದ್ಧಪಡಿಸಿದ ಜಾವೆಲಿನ್​ ಎಸೆತದ ಪವರ್​ಹೌಸ್​ ಜರ್ಮನಿ! ಒಲಿಂಪಿಕ್ಸ್​​​​ ಚಿನ್ನಕ್ಕೆ ಹೊಸ ಸವಾಲು

neer max web
Published on

ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ನೀರಜ್​ ಚೋಪ್ರಾಗೆ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಜಾವೆಲಿನ್​ ಎಸೆತದ ಸ್ವರ್ಣ ಪದಕ ಉಳಿಸಿಕೊಳ್ಳಲು ಪ್ರಬಲ ಪ್ರತಿಸ್ಪರ್ಧೆ ಎದುರಾಗುವ ಸಾಧ್ಯತೆ ಕಾಣಿಸಿದೆ. ಜರ್ಮನಿಯ 19 ವರ್ಷದ ಮ್ಯಾಕ್ಸ್​ ಡೆಹ್ನಿಂಗ್​ ಜಾವೆಲಿನ್​ ಎಸೆತ ಸ್ಪರ್ಧೆಯಲ್ಲಿ ಹೊಸ ಉದಯೋನ್ಮುಖ ತಾರೆಯಾಗಿ ಮೂಡಿಬಂದಿದ್ದು, ಈಗಾಗಲೆ 90 ಮೀಟರ್​ ಗಡಿಯನ್ನೂ ದಾಟಿದ್ದಾರೆ. ಹೀಗಾಗಿ ನೀರಜ್​ ಪ್ಯಾರಿಸ್​ನಲ್ಲಿ ಮೊದಲ ಬಾರಿಗೆ 90 ಮೀಟರ್​ಗಿಂತ ಅಧಿಕ ದೂರ ಜಾವೆಲಿನ್​ ಎಸೆಯದಿದ್ದರೆ ಸತತ 2ನೇ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಡುವುದು ಕಷ್ಟಕರವಾಗಲಿದೆ.

ಡೆಹ್ನಿಂಗ್​ ಇತ್ತೀಚೆಗೆ ಜರ್ಮನ್​ ವಿಂಟರ್​ ಥ್ರೋಯಿಂಗ್​ ಚಾಂಪಿಯನ್​ಷಿಪ್​ನಲ್ಲಿ 90.20 ಮೀಟರ್​ ದೂರ ಜಾವೆಲಿನ್​ ಎಸೆದಿದ್ದು, 90 ಮೀ. ಗಡಿ ದಾಟಿದ ಅತ್ಯಂತ ಕಿರಿಯರೆನಿಸಿದ್ದಾರೆ. ಅಲ್ಲದೆ ಹಾಲಿ ಒಲಿಂಪಿಕ್ಸ್​ ವರ್ಷದಲ್ಲಿ 90 ಮೀಟರ್​ಗಿಂತ ದೂರ ಜಾವೆಲಿನ್​ ಎಸೆದ ಮೊದಲಿಗರಾಗಿದ್ದಾರೆ. ಡೆಹ್ನಿಂಗ್​ ಈಗಾಗಲೆ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆಯನ್ನೂ ಸಂಪಾದಿಸಿದ್ದಾರೆ. ಜುಲೈ 26ರಿಂದ ಆಗಸ್ಟ್​ 11ರವರೆಗೆ ನಡೆಯಲಿರುವ ಪ್ಯಾರಿಸ್​ ಒಲಿಂಪಿಕ್ಸ್​ನ ಜಾವೆಲಿನ್​ ಎಸೆತ ಸ್ಪರ್ಧೆಗೆ ನೇರಅರ್ಹತೆ ಸಂಪಾದಿಸಲು 83 ಮೀ. ಮಾನದಂಡವಾಗಿದೆ.

ಜಾವೆಲಿನ್​ ಎಸೆತ ಸ್ಪರ್ಧೆಯ ಪವರ್​ಹೌಸ್​ ಎನಿಸಿದ್ದ ಜರ್ಮನಿ ಇತ್ತೀಚೆಗೆ ನೀರಜ್​ ಪ್ರವರ್ಧಮಾನಕ್ಕೆ ಬಂದ ಬಳಿಕ ಆ ಖ್ಯಾತಿ ಕಳೆದುಕೊಂಡಿತ್ತು. ಇದೀಗ ಡೆಹ್ನಿಂಗ್​ ಮಿಂಚುವುದರೊಂದಿಗೆ ಜರ್ಮನಿ ಮತ್ತೆ ಆ ಖ್ಯಾತಿಯನ್ನು ತನ್ನದಾಗಿಸುವ ನಿರೀಕ್ಷೆಯಲ್ಲಿದೆ.

26 ವರ್ಷದ ನೀರಜ್​ ಚೋಪ್ರಾ ಈಗಾಗಲೆ ಡೈಮಂಡ್​ ಲೀಗ್​ ಸಹಿತ ವಿಶ್ವದ ಎಲ್ಲ ಪ್ರಮುಖ ಅಥ್ಲೆಟಿಕ್ಸ್​ ಕೂಟಗಳ ಸ್ವರ್ಣ ಪದಕವನ್ನು ಸಂಪಾದಿಸಿದ್ದರೂ, ಒಮ್ಮೆಯೂ 90 ಮೀ. ಗಡಿ ದಾಟಿಲ್ಲ. 89.94 ಮೀ. ಅವರ ಗರಿಷ್ಠ ಎಸೆತವಾಗಿದೆ. ಆದರೆ ಹಾಲಿ ಋತುವಿನಲ್ಲಿ ನೀರಜ್​ ಇನ್ನೂ ಸ್ಪರ್ಧೆ ಆರಂಭಿಸಿಲ್ಲ. ಸದ್ಯ ದಕ್ಷಿಣ ಆಫ್ರಿಕಾ, ಸ್ವಿರ್ಜಲೆಂಡ್​ನಲ್ಲಿ ತರಬೇತಿ ಪಡೆಯುತ್ತಿರುವ ನೀರಜ್​, ಮರಳಿ ಕಣಕ್ಕಿಳಿದಾಗ 90 ಮೀ. ಗಡಿ ದಾಟಿದರೆ, ಡೆಹ್ನಿಂಗ್​ ಸವಾಲು ಬದಿಗೊತ್ತಿ ಒಲಿಂಪಿಕ್ಸ್​ ಸ್ವರ್ಣ ಉಳಿಸಿಕೊಳ್ಳುವ ನಿರೀಕ್ಷೆಯೂ ಹೆಚ್ಚಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net