

| ಗುರುರಾಜ್ ಬಿ.ಎಸ್. ಬೆಂಗಳೂರು
ಯುವ ಮಹಿಳಾ ಆಟಗಾರ್ತಿಯರಿಗೆ ಚಿಮ್ಮು ಹಲಗೆಯಾಗಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲುಪಿಎಲ್) ಆರ್ಸಿಬಿ ತಂಡದ ಪರವಾಗಿ ನೀಡಿದ ಪ್ರದರ್ಶನದಿಂದ 2023ರಲ್ಲಿ ಭಾರತ ಮಹಿಳಾ ತಂಡದ ಪರ ಟಿ20 ಹಾಗೂ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಬೆಂಗಳೂರಿನ ಹುಡುಗಿ ಶ್ರೇಯಾಂಕಾ ಪಾಟೀಲ್ ಭವಿಷ್ಯದ ತಾರೆ ಎನಿಸಿದ್ದಾರೆ. ಜತೆಗೆ ವೆಸ್ಟ್ ಇಂಡೀಸ್ನ ಕೆರಿಬಿಯನ್ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿದ್ದಾರೆ. ಡಬ್ಲುಪಿಎಲ್ನ 2ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದ ಬಳಿಕ ಶ್ರೇಯಾಂಕಾ, "ವಿಜಯವಾಣಿ'ಯೊಂದಿಗೆ ಮಾತನಾಡಿದ್ದಾರೆ.
*ತವರಿನ ಅಂಗಣದಲ್ಲಿ ಆರ್ಸಿಬಿ ಪರ ಆಡಿದ ಅನುಭವ ಹೇಗಿತ್ತು?
-ಇದುವರೆಗೆ ಗ್ಯಾಲರಿಯಲ್ಲಿ ಕುಳಿತು ಐಪಿಎಲ್ನಲ್ಲಿ ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದೆ. ಈಗ ನಾನು ಅದೇ ಕ್ರೀಡಾಂಗಣದಲ್ಲಿ ಆಡುತ್ತಿದ್ದೇನೆ. ಎಲ್ಲರೂ ನನಗೆ ಬೆಂಬಲ ಮತ್ತು ಪ್ರೀತಿ ನೀಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಆರ್ಸಿಬಿ ತಂಡದ ಸೋಲು-ಗೆಲುವಿನಲ್ಲಿ ಅಭಿಮಾನಿಗಳು ಜತೆಯಾಗಿ ನಿಂತಿದ್ದಾರೆ. ಇದಕ್ಕಿಂತ ಮೀರಿ ಯಾವುದೂ ಇಲ್ಲ, ಮುಂದೆಯೂ ಬೆಂಬಲ ನೀಡಲಿದ್ದಾರೆ.
*ಭಾರತ ತಂಡಕ್ಕೆ ಪದಾರ್ಪಣೆ ಬಳಿಕ ಈ ಬಾರಿಯ ಡಬ್ಲುಪಿಎಲ್ನಲ್ಲಿ ಏನು ನಿರೀಸಬಹುದು?
-ಯಾವುದೇ ರೀತಿಯ ದೊಡ್ಡ ನಿರೀೆಗಳಿಲ್ಲ. ನಾವೂ ತಂಡಕ್ಕೆ ಏನು ಅನಿವಾರ್ಯ ಎಂಬುದನ್ನು ಅರಿತು ಆಡಬೇಕು. ಇದುವರೆಗೆ ತಂಡಕ್ಕೆ ಅಗತ್ಯವಿರುವ ಪ್ರದರ್ಶನ ನೀಡಬೇಕು ಎಂಬುದು ನನ್ನ ಉದ್ದೇಶ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡುವುದು ಪ್ರಮುಖ ಅಂಶವಾಗಿರುತ್ತದೆ.
*ಕಳೆದ ಎರಡು ವರ್ಷದಲ್ಲಿ ನಿಮ್ಮ ಜೀವನ ಸಾಕಷ್ಟು ಬದಲಾವಣೆ ಕಂಡಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
-ತುಂಬಾ ಜನ ಮಹಿಳಾ ಕ್ರಿಕೆಟ್ ಅನ್ನು ವೀಸುತ್ತಿದ್ದಾರೆ. 10 ವರ್ಷದ ಹಿಂದೆ ಮಹಿಳೆಯರ ಕ್ರಿಕೆಟ್ನಲ್ಲಿಯೂ ಸಾಕಷ್ಟು ಸಾಧಿಸಬಹುದು, ಜನ ನಮ್ಮನ್ನು ಗುರುತಿಸುತ್ತಾರೆ ಎನ್ನುವುದರ ಬಗ್ಗೆ ಹಲವು ಅನುಮಾನಗಳಿದ್ದವು. ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ನಲ್ಲಿ ಬದಲಾವಣೆಗಳಾಗಿದ್ದು, ತುಂಬಾ ಜನ ಕ್ರಿಕೆಟ್ನತ್ತ ಗಮನಹರಿಸಿದ್ದಾರೆ. ಡಬ್ಲುಪಿಎಲ್ನಲ್ಲಿ ನೀಡುವ ಪ್ರದರ್ಶನ ನಮಗೆ ಹೆಚ್ಚಿನ ಆತ್ಮವಿಶ್ವಾಸ ನೀಡಲಿದೆ.
*ಐಪಿಎಲ್ ರೀತಿಯಲ್ಲಿ ಡಬ್ಲುಪಿಎಲ್ ಸಹ ಭಾರತ ತಂಡ ಸೇರಲು ಉತ್ತಮ ವೇದಿಕೆಯೇ?
-ಖಂಡಿತಾ... ಪುರುಷರಿಗೆ ಟೀಮ್ ಇಂಡಿಯಾ ಸೇರಲು ಐಪಿಎಲ್ ವೇದಿಕೆ ಆಗಿದೆ. ಅದೇ ರೀತಿ ಡಬ್ಲುಪಿಎಲ್ ಸಹ ಮಹಿಳೆಯರಿಗೆ ಉತ್ತಮ ವೇದಿಕೆ. ಈ ಟೂರ್ನಿಯಲ್ಲಿ ನಾವೂ ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಲಿದೆ ಎಂಬ ನಂಬಿಕೆ ಇರಲಿದೆ. ಮುಂದಿನ ದಿನಗಳಲ್ಲಿ ಡಬ್ಲುಪಿಎಲ್ ಸಹ ಅತ್ಯಂತ ಯಶಸ್ವಿ ಟೂರ್ನಿ ಎನಿಸಿಕೊಳ್ಳಿದೆ.
*ಮುಂಬೈನಲ್ಲಿ ಆಡಿದ ಕಳೆದ ಆವೃತ್ತಿಗೂ ಈ ಬಾರಿಯ ಟೂರ್ನಿಗೂ ಏನು ವ್ಯತ್ಯಾಸ ಇದೆ?
-ಬೆಂಗಳೂರಿನಲ್ಲಿ ಆಡುತ್ತಿರುವುದರ ಜತೆಗೆ ತವರು ಅಭಿಮಾನಿಗಳ ಎದುರು ಕಣಕ್ಕಿಳಿಯುವುದು ನಮಗೆ ಈ ಬಾರಿಯ ಒಂದು ಪ್ಲಸ್ ಪಾಯಿಂಟ್. ಕಳೆದ ವರ್ಷ ಉತ್ತಮ ಆರಂಭ ಸಿಕ್ಕಿದೆ. 10-11 ತಿಂಗಳಿನಿಂದ ಎಲ್ಲ ದೇಶೀಯ ಆಟಗಾರ್ತಿಯರು ಆರ್ಸಿಬಿ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಕಳೆದ ವರ್ಷದ ಅನುಭವದಿಂದ ಈ ಬಾರಿ ಸಾಕಷ್ಟು ಕಲಿತಿದ್ದೇನೆ.
*ವಿಶ್ವದ ಪ್ರಸಿದ್ಧ ಆಲ್ರೌಂಡರ್ ಆಸ್ಟ್ರೆಲಿಯಾದ ಎಲ್ಲಿಸ್ ಪೆರ್ರಿ ಅವರೊಂದಿಗಿನ ಒಡನಾಟ ಹೇಗಿದೆ?
&ಎಲ್ಲಿಸ್ ಪೆರ್ರಿ ಅವರು ಆರ್ಸಿಬಿ ತಂಡದಲ್ಲಿರುವುದು ನಮಗೆಲ್ಲ ಪ್ಲಸ್ ಪಾಯಿಂಟ್. ಅವರ ಕ್ರಿಕೆಟ್ ಅನುಭವ ನಮ್ಮಂಥ ದೇಶೀಯ ಹಾಗೂ ಸ್ಥಳಿಯ ಆಟಗಾರ್ತಿಯರಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಲು ನೆರವಾಗಿದೆ. ಅವರೊಂದಿಗೆ ಕೆಲ ವಿಷಯ ಚರ್ಚೆ ನಡೆಸಿದಾಗ ನಮಗೆ ಕಲಿಯಲು ಸಾಕಷ್ಟು ವಿಷಯಗಳಿವೆ ಅನಿಸುತ್ತದೆ. ಕಳೆದ ಬಾರಿಗಿಂತ ಈ ಬಾರಿ ತಂಡದೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದಾರೆ.
*ಕಳೆದ ಬಾರಿ ಮಾಡಿದ ತಪ್ಪುಗಳನ್ನು ಈ ಬಾರಿ ಹೇಗೆ ಸುಧಾರಿಸಿದ್ದೀರಿ?
-ಪಂದ್ಯದ ಒತ್ತಡದ ಸಂದರ್ಭದಲ್ಲಿ ತಪ್ಪುಗಳು ಆಗುವುದು ಸಹಜ. ಅಂಥ ಸಮಯದಲ್ಲಿ ನಾವು ಮಾನಸಿಕವಾಗಿ ಎಷ್ಟು ಬಲಿಷ್ಠವಾಗಿದ್ದೇವೆ ಎಂಬುದು ಮುಖ್ಯವಾಗಿರುತ್ತದೆ. ಒತ್ತಡದಲ್ಲಿಯೂ ನಮ್ಮ ಮುಂದಿನ ಗುರಿ ಹಾಗೂ ಯೋಜನೆಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತಂದರೆ, ಲಿತಾಂಶ ನಮ್ಮ ಪರವಾಗಿರುತ್ತದೆ.
*ಅಂತಾರಾಷ್ಟ್ರೀಯ, ದೇಶೀಯ ಹಾಗೂ ವಲಯ ಮಟ್ಟದ ಟೂರ್ನಿಯಲ್ಲಿ ಆಡುವುದು ಎಷ್ಟು ಕಷ್ಟ ?
-ಪಂದ್ಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಆಟಗಾರರಿಗೆ ಒಂದು ಚಾಲೆಂಜ್. ತುಂಬಾ ವರ್ಷಗಳಿಂದ ಇದೇ ರೀತಿ ಆಡುತ್ತಿರುವುದರಿಂದ ಎಲ್ಲ ಪ್ರಕಾರದ ಕ್ರಿಕೆಟ್ನಲ್ಲಿ ಬಹಳ ವ್ಯತ್ಯಾಸ ಇರುವುದಿಲ್ಲ. ನಮ್ಮ ಕೌಶಲ್ಯದ ಮೇಲೆ ಅವಲಂಬಿತವಾಗಿದೆ.
*ಮೊದಲ ಪಂದ್ಯದಲ್ಲಿ ಗೆಲುವಿನ ಬಳಿಕ ಮುಂದಿನ ಯೋಜನೆ ?
-ಉತ್ತಮ ಆರಂಭ ಸಿಕ್ಕಿದೆ...ಇದೇ ಆತ್ಮವಿಶ್ವಾಸದಲ್ಲಿ ಮುಂದಿನ ಪಂದ್ಯಗಳಲ್ಲಿ ಮುಂದುವರಿಯುತ್ತೇವೆ. ಪರಸ್ಪರ ಆಟಗಾರರೂ ಬೆನ್ನುಲುಬಾಗಿ ನಿಂತಿದ್ದಾರೆ. ಒಬ್ಬರ ಯಶಸ್ಸನ್ನು ಎಲ್ಲರೂ ಸೆಲೆಬ್ರೆಟ್ ಮಾಡಲಾಗುತ್ತಿದೆ.