

ನವದೆಹಲಿ: ಮುಂದಿನ ವರ್ಷ ಅಂದರೆ 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಕಿತ್ತಾಟದಿಂದ ಸಖತ್ ಸೌಂಡ್ ಮಾಡುತ್ತಿದೆ. ಏಕೆಂದರೆ ಈ ಬಾರಿಯ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತಿರುವುದರಿಂದ ಭಾರತ ಭಾಗಿಯಾಗುತ್ತ ಇಲ್ಲವಾ ಎಂಬುದೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂದು ಬಿಸಿಸಿಐ ಐಸಿಸಿ ಮೇಲೆ ಒತ್ತಡ ಹೇರಿದ್ದು, ಇತ್ತ ಪಿಸಿಬಿ ಪಾಕಿಸ್ತಾನದ ನೆಲದಲ್ಲಿ ಭಾರತ ಅಡಲೇಬೇಕು ಎಂದು ಪಟ್ಟಿ ಹಿಡಿದಿದೆ.
ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ಭಾರತ-ಪಾಕಿಸ್ತಾನ ನಡುವಿನ ಕಿತ್ತಾಟದ ವಿಚಾರವಾಗಿ ಮಾಜಿ ಹಾಗೂ ಹಾಲಿ ಆಟಗಾರರು ನೀಡುತ್ತಿರುವ ಹೇಳಿಕೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಈ ಕುರಿತು ಮಾತನಾಡಿದ್ದು, ಯಾವುದೇ ಕಾರಣಕ್ಕೂ ಭಾರತ ಭಾಗವಹಿಸಬಾರದು ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಹರ್ಭಜನ್, ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಏಕೆ ಹೋಗಬೇಕು ಎಂಬ ವಿಷಯ ನನಗೆ ಅರ್ಥವಾಗುತ್ತಿಲ್ಲ. ಪಾಕಿಸ್ತಾನದಲ್ಲಿ ಪ್ರತಿನಿತ್ಯದ ಘಟನೆಗಳು ಹಾಗೂ ಅಲ್ಲಿನ ಪರಿಸ್ಥಿತಿ ನೋಡಿದರೆ ಅಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸುವುದು ಸೂಕ್ತ ಅಲ್ಲಾ ಎಂದು ನನಗನಿಸುತ್ತಿದೆ. ನನ್ನ ಪ್ರಕಾರ ಭಾರತ ತಂಡ ಅಲ್ಲಿಗೆ ಪ್ರಯಾಣಿಸದೆ ಇರುವುದು ಸೂಕ್ತ ಎನಿಸುತ್ತದೆ. ಬಿಸಿಸಿಐ ಈಗಾಗಲೇ ತನ್ನ ನಿಲುವನ್ನು ತಿಳಿಸಿದ್ದು, ಸಂಪೂರ್ಣವಾಗಿ ಸರಿಯಾಗಿದೆ ಮತ್ತು ನಮ್ಮ ಆಟಗಾರರ ಸುರಕ್ಷತೆಗಿಂತ ಬೇರೇನೂ ಮುಖ್ಯವಲ್ಲ. ನಾನು ಬಿಸಿಸಿಐ ನಿಲುವನ್ನು ಬೆಂಬಲಿಸುತ್ತೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ, ಇತ್ತೀಚಿಗೆ ಕೊಲಂಬೊದಲ್ಲಿ ಮುಕ್ತಾಯಗೊಂಡ ಐಸಿಸಿ ವಾರ್ಷಿಕ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿಯೂ ಮಾತುಕತೆ ನಡೆದಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ನಿರ್ಧಾರವನ್ನು ತಿಳಿಸಿದ್ದು, ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಈವೆಂಟ್ ವೇಳಾಪಟ್ಟಿ ಹಾಗೂ ಬಜೆಟ್ಅನ್ನು ಪಿಸಿಬಿ ಸಲ್ಲಿಸಿದ್ದು, ಭಾರತದ ಪಂದ್ಯಗಳನ್ನು ಲಾಹೋರ್ನಲ್ಲಿ ನಡೆಸುವುದಾಗಿ ತಿಳಿಸಿದೆ. ಈ ಬಗ್ಗೆ ಐಸಿಸಿ ಚರ್ಚಿಸಿ ಆ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.
ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್ ಹೋಟೆಲ್ ನಿರ್ಮಿಸುವುದಾಗಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭೈ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ.