ಏಷ್ಯನ್​ ಗೇಮ್ಸ್​ನ ಶಾಟ್​ಪುಟ್​ ಸ್ಪರ್ಧೆಯಲ್ಲಿ ಭಾರತಕ್ಕೆ 72 ವರ್ಷಗಳ ಬಳಿಕ ಪದಕ ಗೆದ್ದುಕೊಟ್ಟ ಕಿರಣ್​

kiran web
Published on

ಹಾಂಗ್​ರೆೌ: ಉತ್ತರ ಪ್ರದೇಶದ ಟ್ರಾಫಿಕ್​ ಪೊಲೀಸ್​ ಅಧಿಕಾರಿಯ ಮಗಳು ಕಿರಣ್​ ಬಲಿಯಾನ್​ ಕಂಚು ಗೆಲುವಿನೊಂದಿಗೆ, ಶುಕ್ರವಾರ ಆರಂಭಗೊಂಡ ಏಷ್ಯಾಡ್​ ಅಥ್ಲೆಟಿಕ್ಸ್​ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ಜತೆಗೆ ಏಷ್ಯನ್​ ಗೇಮ್ಸ್​ನಲ್ಲಿ ಮಹಿಳೆಯರ ಶಾಟ್​ಪುಟ್​ ಸ್ಪರ್ಧೆಯಲ್ಲಿ ಕಳೆದ 72 ವರ್ಷಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ. 24 ವರ್ಷದ ಕಿರಣ್​ ಬಲಿಯಾನ್​ 17.36 ಮೀ. ಎಸೆತದೊಂದಿಗೆ ಕಂಚು ಒಲಿಸಿಕೊಂಡರು. ಚೀನಾ ಚಿನ್ನ, ಬೆಳ್ಳಿ ವಶಪಡಿಸಿಕೊಂಡಿತು.

ಭಾರತದ ಮತ್ತೋರ್ವ ಸ್ಪರ್ಧಿ ಮನ್​ಪ್ರೀತ್​ ಕೌರ್​ (16.25 ಮೀ) 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಮುನ್ನ 1951ರಲ್ಲಿ ಆಂಗ್ಲೋ ಇಂಡಿಯನ್​ ಬಾರ್ಬರ ವೆಬ್​ಸ್ಟರ್​ ಏಷ್ಯಾಡ್​ ಶಾಟ್​ಪುಟ್​ನಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದರು.

ಫೈನಲ್​ಗೆ ಐಶ್ವರ್ಯಾ, ಅಜ್ಮಲ್​

ಮಹಿಳೆಯರ 400 ಮೀ. ಓಟದಲ್ಲಿ ಐಶ್ವರ್ಯಾ ಮಿಶ್ರಾ (52.73 ಸೆ) ಹೀಟ್ಸ್​ನಲ್ಲಿ 2ನೇ ಸ್ಥಾನ ಪಡೆದು ಫೈನಲ್​ಗೇರಿದರೆ, ಹಿಮಾಂಶಿ ಮಲಿಕ್​ (57.82ಸೆ) ಹೀಟ್ಸ್​ನಲ್ಲಿ 5ನೇ ಸ್ಥಾನ ಪಡೆದು ಹೊರಬಿದ್ದರು. ಪುರುಷರ 400 ಮೀ. ಓಟದಲ್ಲಿ ಮುಹಮದ್​ ಅಜ್ಮಲ್​ (45.76ಸೆ) ಹೀಟ್ಸ್​ನಲ್ಲಿ 2ನೇ ಸ್ಥಾನ ಪಡೆದು ಫೈನಲ್​ಗೇರಿದರೆ, ಮುಹಮದ್​ ಅನಾಸ್​ ಯಾಹ್ಯಾ (46.29ಸೆ) ಹೀಟ್ಸ್​ನಲ್ಲೇ ಹೊರಬಿದ್ದರು.

ಮಹಿಳೆಯರ ಹ್ಯಾಮರ್​ ಥ್ರೋನಲ್ಲಿ ತಾನ್ಯಾ ಚೌಧರಿ ಮತ್ತು ರಚನಾ ಕುಮಾರಿ ಕ್ರಮವಾಗಿ 7, 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. 20 ಕಿಮೀ. ನಡಿಗೆ ಸ್ಪರ್ಧೆಯ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ವಿಕಾಸ್​ ಸಿಂಗ್​ ಮತ್ತು ಪ್ರಿಯಾಂಕಾ ಗೋಸ್ವಾಮಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net