

ದುಬೈ: ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾರ ಮತ್ತು ಪಾಕ್ ಮಾಜಿ ಆಟಗಾರ ಶೋಯಿಬ್ ಮಲಿಕ್ ವೈವಾಹಿಕ ಸಂಬಂಧ ಮುರಿದುಬಿದ್ದಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಇಷ್ಟು ದಿನ ಸಾನಿಯಾ ಮತ್ತು ಶೋಯಿಬ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿದರೂ ಕೇವಲ ವದಂತಿ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಮಲಿಕ್ ಅವರು ದಿಢೀರನೇ ಪಾಕ್ ನಟಿ ಸನಾ ಜಾವೇದ್ ಜತೆ ಮದುವೆ ಆಗಿರುವ ಫೋಟೋವನ್ನು ಶೇರ್ ಮಾಡಿಕೊಂಡ ಬೆನ್ನಲ್ಲೇ ಡಿವೋರ್ಸ್ ವದಂತಿ ಅಧಿಕೃತ ಸ್ವರೂಪ ಪಡೆದುಕೊಂಡಿತು.
ಸನಾ ಜಾವೇದ್ಗೆ ಇದು ಎರಡನೇ ಮದುವೆಯಾದರೆ, ಮಲಿಕ್ಗೆ ಮೂರನೇ ಮದುವೆ. ಇಬ್ಬರ ಮದುವೆಗೆ ಬೆರಳಣಿಕೆಯಷ್ಟೇ ಮಂದಿ ಅಭಿನಂದನೆ ಸಲ್ಲಿಸಿದರು. ಆದರೆ, ಬಹುತೇಕ ಮಂದಿ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪಾಕ್ ಮೀಡಿಯಾಗಳು ಸಹ ಮಲಿಕ್ ವಿರುದ್ಧವೇ ಆರೋಪಗಳ ಸುರಿಮಳೆಗೈದಿವೆ. ಗಮನಾರ್ಹ ಸಂಗತಿ ಏನೆಂದರೆ, ಮಲಿಕ್ ಮದುವೆಗೆ ಅವರ ಕುಟುಂಬಸ್ಥರೇ ಹಾಜರಾಗಿರಲಿಲ್ಲ.
ಇನ್ನು ಶೋಯಿಬ್ ನಡೆ ಸಾನಿಯಾ ಮೇಲೆ ತೀವ್ರ ಪರಿಣಾಮ ಬೀರಿದೆ. ಸಾನಿಯಾ ತುಂಬಾ ನೋವು ಅನುಭವಿಸುತ್ತಿದ್ದಾರೆ. ಆದರೆ, ಅದಕ್ಕಿಂತ ಹೆಚ್ಚಿನ ನೋವನ್ನು ಸಾನಿಯಾ-ಶೋಯಿಬ್ ಅವರ 6 ವರ್ಷದ ಪುತ್ರ ಇಝಾನ್ ಅನುಭವಿಸುತ್ತಿದ್ದಾನೆ. ಶಾಲೆಗಳಲ್ಲಿ ಸಹಪಾಠಿಗಳ ಮಾತಿನಿಂದ ಅಕ್ಷರಶಃ ಕುಗ್ಗಿರುವ ಇಝಾನ್, ತಾಯಿಯ ಮುಂದೆ ಕಣ್ಣೀರಿಟ್ಟಿದ್ದಾನೆ. ಮಗನ ಪರಿಸ್ಥಿತಿಯ ಬಗ್ಗೆ ಸಾನಿಯಾ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಮಗನಿಗಾಗಿ ದಿಟ್ಟ ನಿರ್ಧಾರ
ಮಗನಿಗೆ ಎದುರಾಗಿರುವ ಕಷ್ಟಗಳಿಗೆ ಸ್ಪಂದಿಸಿದ ಸಾನಿಯಾ ಮಿರ್ಜಾ, ಈ ಸಮಸ್ಯೆಯನ್ನು ಬಗೆಹರಿಸಲು ಧೈರ್ಯದ ನಿರ್ಧಾರ ಕೈಗೊಂಡಿದ್ದಾರೆ. ದುಬೈನಲ್ಲಿ ವಾಸಿಸುತ್ತಿದ್ದರೂ, ಇಝಾನ್ ವಿಶ್ವ ದರ್ಜೆಯ ಶಾಲೆಯಲ್ಲಿ ವ್ಯಾಸಂಗ ಮಾಡಿದರೂ, ಸಾನಿಯಾ ಭಾರತದ ಹೈದರಾಬಾದ್‌ನಲ್ಲಿರುವ ತನ್ನ ಮನೆಗೆ ಮರಳಲು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕ್ರಮವು ಇಝಾನ್‌ಗೆ ಹೊಸ ಆರಂಭವನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ದುಬೈನಲ್ಲಿ ಮಗನು ಎದುರಿಸಿದ ಸವಾಲುಗಳಿಂದ ರಕ್ಷಿಸಲು ಅವನನ್ನು ಭಾರತೀಯ ಶಾಲೆಗೆ ಸೇರಿಸುವುದು ಉತ್ತಮ ಎಂಬ ನಿರ್ಧಾರಕ್ಕೆ ಸಾನಿಯಾ ಬಂದಿದ್ದಾರೆ.
ಡಿವೋರ್ಸ್ ವಿಚಾರ ಶುರುವಾಗಿದ್ದು ಯಾವಾಗ?
2022ರ ನವೆಂಬರ್ 11ರಂದು ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್ ವದಂತಿ ಕತೆ ಇಂದು ಶೋಯಿಬ್, ಸನಾ ಜಾವೇದ್ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್ ಬೇರೆಯಾಗಿರುವುದು ಖಚಿತವಾಗಿದೆ.
ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್)