

ಡ್ಯಾಲೆಸ್: ಪ್ರಸಕ್ತ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಳು ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿದ್ದು, ನಿನ್ನೆ (ಜೂ.06) ನಡೆದ ರೋಚಕ ಸೂಪರ್ ಓವರ್ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಪಾಕಿಸ್ತಾನ ತಂಡ ಹೀನಾಯ ಸೋಲು ಅನುಭವಿಸಿತು. ಸೋಲುಂಡ ಪಾಕ್ ತಂಡಕ್ಕೆ ವ್ಯಾಪಕ ಟೀಕೆ ವ್ಯಕ್ತಪಡಿಸಿದ ಕ್ರಿಕೆಟ್ ಅಭಿಮಾನಿಗಳು, ಇದೆಂಥಾ ಪ್ರದರ್ಶನ ಎಂದು ಕಿಡಿಕಾರಿದರು.
ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ರೋಚಕ ಟಿ20 ವಿಶ್ವಕಪ್ನ 11ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಯುಎಸ್ಎ ತಂಡಕ್ಕೆ ಎಲ್ಲಿಲ್ಲದ ಮೆಚ್ಚುಗೆ, ಮನ್ನಣೆಗಳು ಹರಿದುಬಂದರೆ, ಪಾಕ್ ಆಟಗಾರರಿಗೆ ಮಾತ್ರ ವ್ಯಾಪಕ ಛೀಮಾರಿ ವ್ಯಕ್ತವಾದವು. ಇನ್ನು ಸೋಲಿನ ಹಿಂದಿರುವ ಕಾರಣ ಬಿಚ್ಚಿಟ್ಟ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂರನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.
ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನವನ್ನು ಟೀಕೆ ಮಾಡುತ್ತಿರುವವರ ಮಧ್ಯೆ ಪಾಕ್ನ ಮಾಜಿ ಹಿರಿಯ ಆಟಗಾರ ಶೋಯಿಬ್ ಅಖ್ತರ್ ಮಾಡಿರುವ ಟ್ವೀಟ್ ಮಾತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. "ಆತಿಥೇಯರ ತಂಡದ ಉತ್ತಮ ಪ್ರದರ್ಶನವೇ ಮೆನ್ ಇನ್ ಗ್ರೀನ್ ಸೋಲಿಗೆ ಕಾರಣ. ಪಾಕ್ ಆಟಗಾರರು ಸೋಲುವುದಕ್ಕೆ ಅರ್ಹರು. ಇಲ್ಲಿ ಬೌಲರ್ಗಳ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ" ಎಂದರು.
ಇದನ್ನೂ ಓದಿ: ಮೌಲ್ಯಮಾಪನ ವೇಳೆ ಎಚ್ಚರಿಕೆ ವಹಿಸಲಿ
"ಪಾಕ್ ಉತ್ತಮ ಆರಂಭ ಪಡೆಯಲಿಲ್ಲ. ಅದಕ್ಕೆ ಯುಎಸ್ಎ ವಿರುದ್ಧ ಸೋಲಿಗೆ ಶರಣಾಗಿದ್ದೇವೆ. ನಾವು 1999ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮಾಡಿದಂತೆಯೇ ಈಗಲೂ ಮಾಡಿದ್ದೇವೆ. ಒಂದು ರೀತಿ ಹೇಳಬೇಕೆಂದರೆ ಇತಿಹಾಸ ಮರುಕಳಿಸಿದೆ. ದುರದೃಷ್ಟವಶಾತ್, ಪಾಕಿಸ್ತಾನವು ಎಂದಿಗೂ ಗೆಲ್ಲಲು ಅರ್ಹವಾಗಿರಲಿಲ್ಲ. ಪಾಕ್ ಸೋಲು ನನಗೆ ಭಾರೀ ಬೇಸರ ಮತ್ತು ನೋವು ತಂದಿದೆ" ಎಂದಿದ್ದಾರೆ,(ಏಜೆನ್ಸೀಸ್).