

ನವದೆಹಲಿ: ಲಾಕ್ಡೌನ್ ಸಮಯದಲ್ಲಿನ ವಿವಿಧ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತ ಬಂದಿರುವ ಟೀಮ್ ಇಂಡಿಯಾದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಇದೀಗ ಪತ್ನಿ ಅಯೇಷಾ ಮನ ಒಲಿಸುವ ಸಲುವಾಗಿ ನೃತ್ಯ ಮಾಡಿದ್ದಾರೆ. ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋಗೆ ಸಹ&ಆಟಗಾರ ಹಾಗೂ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕಾಲೆಳೆದಿದ್ದಾರೆ.
ಜನಪ್ರಿಯ ಗಾಯಕ ಬಲ್ಲಿ ಸಗೂ ಅವರ ಆಜಾ ನಾಚ್ಲೆ ಹಾಡಿನ ಹಿನ್ನೆಲೆಯಲ್ಲಿ ನರ್ತಿಸಿರುವ ಧವನ್ಗೆ ಪುತ್ರ ಜೊರಾವರ್ ಕೂಡ ಸಾಥ್ ನೀಡಿದ್ದಾರೆ. ಇದಕ್ಕೆ ಧವನ್, ಪತ್ನಿಯ ಮನ ಒಲಿಸಲು ಪುತ್ರನ ಬೆಂಬಲ ಅಗತ್ಯ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚಾಹಲ್, ಒಂದು ವೇಳೆ ಪತ್ನಿ ಸಿಟ್ಟಾದರೆ ಆಗ ಪುತ್ರ ಜೊರಾವರ್ ಕೂಡ ಆಕೆಯ ಕಡೆ ವಾಲುತ್ತಾನೆ ಸಹೋದರ ಎಂದು ಕಮೆಂಟ್ ಹಾಕಿ ತಮಾಷೆ ಮಾಡಿದ್ದಾರೆ.
ಶಿಖರ್ ಧವನ್ ಈ ಮುನ್ನ ಪುತ್ರ ಜೊರಾವರ್ ಸೂಪರ್ ಹೀರೋ ಉಡುಪು ಧರಿಸಿ ಚಪಾತಿ ಕಾಯಿಸುತ್ತಿರುವ ವಿಡಿಯೋ ಪ್ರಕಟಿಸಿ ಗಮನ ಸೆಳೆದಿದ್ದರು. ದೆಹಲಿಯಲ್ಲಿ ಸಮಾಜ ಸೇವೆಯಲ್ಲೂ ತೊಡಗಿಕೊಂಡಿರುವ ಧವನ್, ಇತ್ತೀಚೆಗೆ ಪಾಕಿಸ್ತಾನದ ಹಿಂದು ನಿರಾಶ್ರಿತರ ಶಿಬಿರಕ್ಕೂ ಭೇಟಿ ನೀಡಿ ಅಗತ್ಯ ವಸ್ತುಗಳು ಮತ್ತು ಕ್ರಿಕೆಟ್ ಕಿಟ್ ವಿತರಿಸಿ ಅಭಿಮಾನಿಗಳ ಮನಗೆದ್ದಿದ್ದರು.