

ದುಬೈ: ಆಫ್ಘನ್ ವಿರುದ್ಧ ಕಿವೀಸ್ ಗೆಲ್ಲುವುದರೊಂದಿಗೆ ಕೊನೇ ಲೀಗ್ ಪಂದ್ಯಕ್ಕೆ ಮುನ್ನವೇ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಸೆಮಿಫೈನಲ್ ಹಂತಕ್ಕೇರುವ ಎಲ್ಲ ಬಾಗಿಲುಗಳು ಮುಚ್ಚಿವೆ. ಹೀಗಾಗಿ ಭಾರತ ತಂಡ ಸೋಮವಾರ ನಮೀಬಿಯ ವಿರುದ್ಧ ಆಡಲಿರುವ 5ನೇ ಹಾಗೂ ಅಂತಿಮ ಲೀಗ್ ಪಂದ್ಯ ಕೇವಲ ಔಪಚಾರಿಕ ಆಗಿರಲಿದೆ. ಜಯದೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳುವುದಷ್ಟೇ ಟೀಮ್ ಇಂಡಿಯಾಗೆ ಈಗ ಉಳಿದಿರುವ ಅವಕಾಶವಾಗಿದೆ. ಕೊಹ್ಲಿ-ರವಿಶಾಸ್ತ್ರಿ ಕಾಂಬಿನೇಷನ್‌ನಲ್ಲಿ ಭಾರತಕ್ಕೆ ಇದು ಕೊನೇ ಪಂದ್ಯವಾಗಿರಲಿದೆ.
ಕಿವೀಸ್‌ಗೆ ಆಫ್ಘನ್ ಶಾಕ್ ನೀಡಿದ್ದರೆ, ಭಾರತಕ್ಕೆ ರನ್‌ರೇಟ್ ಲೆಕ್ಕಾಚಾರದ ದೃಷ್ಟಿಯಿಂದ ಇದು ಮಹತ್ವದ ಪಂದ್ಯವಾಗಿರುತ್ತಿತ್ತು. ಆದರೆ ಆಫ್ಘನ್ ಯಾವುದೇ ಪವಾಡ ಮಾಡದಿರುವುದರಿಂದ ಈ ಪಂದ್ಯವೀಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
2003ರ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಬಾರಿ ನಮೀಬಿಯ ತಂಡವನ್ನು ಎದುರಿಸಿದ್ದ ಭಾರತಕ್ಕೆ ಇದು ಟಿ20ಯಲ್ಲಿ ಮೊದಲ ಮುಖಾಮುಖಿ ಆಗಿದೆ. ಆಡಿದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲೇ ಸೂಪರ್-12 ಹಂತಕ್ಕೇರಿ ಗಮನಸೆಳೆದಿರುವ ನಮೀಬಿಯ ಭಾರತಕ್ಕೆ ಪೈಪೋಟಿ ಒಡ್ಡುವ ಹಂಬಲದಲ್ಲಿದೆ.
ಆಫ್ಘನ್ ವಿರುದ್ಧ ಪಂದ್ಯದಲ್ಲಿ ಸಂಜೆ 6.30ರ ವೇಳೆಗೆ ಕಿವೀಸ್ ತಂಡ ಗೆಲುವಿನ ರನ್ ಬಾರಿಸುವುದರೊಂದಿಗೆ ಟೀಮ್ ಇಂಡಿಯಾ ಆಟಗಾರರಲ್ಲಿ ನಿರಾಸೆ ಮನೆಮಾಡಿತ್ತು. ಇದರಿಂದಾಗಿ ಭಾನುವಾರ ಸಂಜೆ ನಿಗದಿಯಾಗಿದ್ದ ಅಭ್ಯಾಸ ಅವಧಿಯೂ ರದ್ದುಗೊಂಡಿತು. ಔಪಚಾರಿಕ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ರಾಹುಲ್ ಚಹರ್ ಅವರಂಥ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.
*ಪಂದ್ಯ ಆರಂಭ: ರಾತ್ರಿ 7.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮತ್ತೆ ಮುಳ್ಳಾದ ಕಿವೀಸ್
ಐಸಿಸಿ ಟೂರ್ನಿಯಲ್ಲಿ ಭಾರತ ತಂಡದ ಪ್ರಶಸ್ತಿ ಆಸೆಗೆ ನ್ಯೂಜಿಲೆಂಡ್ ತಂಡ ಸತತ 3ನೇ ಬಾರಿ ಅಡ್ಡಗಾಲು ಹಾಕಿತು. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲುಣಿಸಿದ್ದ ಕಿವೀಸ್ ತಂಡ ಈ ವರ್ಷ ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲೂ ಕೊಹ್ಲಿ ಬಳಗವನ್ನು ಮಣಿಸಿತ್ತು. ಇದೀಗ ಸತತ 3ನೇ ಐಸಿಸಿ ಟೂರ್ನಿಯಲ್ಲೂ ಭಾರತಕ್ಕೆ ಮೊದಲೆರಡು ಪಂದ್ಯಗಳ ಸೋಲಿನ ಬಳಿಕ ಸೆಮೀಸ್‌ಗೇರಲು ಇದ್ದ ಕೂದಲೆಳೆ ಆಸೆಯನ್ನೂ ಭಗ್ನಗೊಳಿಸಿತು.
2012ರ ಬಳಿಕ ನಾಕೌಟ್‌ಗೇರಲು ವಿಫಲ
ಭಾರತ ತಂಡ 2012ರ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಮೊದಲ ಬಾರಿಗೆ ಐಸಿಸಿ ಟೂರ್ನಿಯೊಂದರಲ್ಲಿ ನಾಕೌಟ್ ಹಂತಕ್ಕೇರಲು ವಿಫಲವಾಗಿದೆ. 2012ರ ಬಳಿಕ ಭಾರತ 2013, 2017ರ ಚಾಂಪಿಯನ್ಸ್ ಟ್ರೋಫಿ, 2015, 2019ರ ಏಕದಿನ ವಿಶ್ವಕಪ್, 2014, 2016ರ ಟಿ20 ವಿಶ್ವಕಪ್‌ಗಳಲ್ಲಿ ನಾಕೌಟ್ ಹಂತಕ್ಕೇರಿತ್ತು. ಅದಕ್ಕೆ ಮುನ್ನ 2009, 2010ರ ಟಿ20 ವಿಶ್ವಕಪ್‌ಗಳಲ್ಲೂ ನಾಕೌಟ್ ಹಂತಕ್ಕೇರಿರಲಿಲ್ಲ. ಆಡಿದ ಮೊದಲೆರಡು ಪಂದ್ಯಗಳಲ್ಲೇ ಸೋತು ಹಾದಿ ದುರ್ಗಮಗೊಳಿಸಿಕೊಂಡ ನಿರಾಸೆಯಿಂದ ಭಾರತಕ್ಕೆ ಇದು 2007ರ ಏಕದಿನ ವಿಶ್ವಕಪ್ ಬಳಿಕ ಅತ್ಯಂತ ಶೋಚನೀಯ ಐಸಿಸಿ ಟೂರ್ನಿಯಾಗಿದೆ.
ಕೊಹ್ಲಿಗಿಲ್ಲ ಐಸಿಸಿ ಟ್ರೋಫಿ ಅದೃಷ್ಟ
ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಮತ್ತೊಮ್ಮೆ ಐಸಿಸಿ ಟ್ರೋಫಿ ಕೈಗೆಟುಕಿಲ್ಲ. 2017ರ ಚಾಂಪಿಯನ್ಸ್ ಟ್ರೋಫಿ ಅವರ ಸಾರಥ್ಯದಲ್ಲಿ ಭಾರತಕ್ಕೆ ಚೊಚ್ಚಲ ಐಸಿಸಿ ಟೂರ್ನಿಯಾಗಿತ್ತು. ಅಲ್ಲಿ ರನ್ನರ್‌ಅಪ್ ಆಗಿದ್ದ ಭಾರತ ಬಳಿಕ 2019ರ ಏಕದಿನ ವಿಶ್ವಕಪ್‌ನಲ್ಲಿ ಸೆಮೀಸ್‌ನಲ್ಲಿ ಎಡವಿತ್ತು. 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲೂ ಪ್ರಶಸ್ತಿ ಕೈತಪ್ಪಿತ್ತು.