ಟಿ20 ವಿಶ್ವಕಪ್​ನಿಂದ ಟೀಮ್ ಇಂಡಿಯಾ ಔಟ್, ಸೆಮೀಸ್‌ಗೇರಿದ ನ್ಯೂಜಿಲೆಂಡ್

india t20 wc web
Published on

ಅಬುಧಾಬಿ: ಭಾರತ ತಂಡಕ್ಕೆ ಸೆಮಿಫೈನಲ್ ಹಂತಕ್ಕೇರಲು ಇದ್ದ ಕೊನೆಯ ಆಶಾಕಿರಣವೂ ಭಾನುವಾರ ಬತ್ತಿಹೋಗಿದೆ. ಇದರೊಂದಿಗೆ ಟೀಮ್ ಇಂಡಿಯಾ 7ನೇ ಆವೃತ್ತಿಯ ಟಿ20 ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ನ್ಯೂಜಿಲೆಂಡ್ ತಂಡ ಸೂಪರ್-12ರಲ್ಲಿ ಗ್ರೂಪ್-2ರ 2ನೇ ತಂಡವಾಗಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್‌ಗಳಿಂದ ಪರಾಭವಗೊಳಿಸುವ ಮೂಲಕ ನ್ಯೂಜಿಲೆಂಡ್ ತಂಡ ಈ ಸಾಧನೆ ಮಾಡಿದೆ. ಪಾಕಿಸ್ತಾನ ತಂಡ ಈಗಾಗಲೆ ಗುಂಪಿನಿಂದ ಮೊದಲ ತಂಡವಾಗಿ ಉಪಾಂತ್ಯಕ್ಕೇರಿತ್ತು.

ಜಯೆದ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡ ಅನುಭವಿ ವೇಗಿಗಳಾದ ಟ್ರೆಂಟ್ ಬೌಲ್ಟ್ (17ಕ್ಕೆ 3) ಮತ್ತು ಟಿಮ್ ಸೌಥಿ (24ಕ್ಕೆ 2) ಬಿಗಿ ದಾಳಿ ಎದುರು 8 ವಿಕೆಟ್‌ಗೆ 124 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ನಾಯಕ ಕೇನ್ ವಿಲಿಯಮ್ಸನ್ (40*ರನ್, 42 ಎಸೆತ, 3 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕಿವೀಸ್ ತಂಡ 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 125 ರನ್ ಪೇರಿಸಿ ಗೆಲುವು ಸಾಧಿಸಿತು. ವಿಲಿಯಮ್ಸನ್ ಮುರಿಯದ 3ನೇ ವಿಕೆಟ್‌ಗೆ ಡೆವೋನ್ ಕಾನ್‌ವೇ (36*) ಜತೆಗೂಡಿ 54 ಎಸೆತಗಳಲ್ಲಿ 68 ರನ್ ಸೇರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಟೂರ್ನಿಯಲ್ಲಿ ಕಂಡ 4ನೇ ಜಯದೊಂದಿಗೆ ಕಿವೀಸ್ ತಂಡ ಸೆಮೀಸ್ ಸ್ಥಾನ ಭದ್ರಪಡಿಸಿಕೊಂಡಿತು. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಬಳಗ ಸೋತಿದ್ದರಷ್ಟೇ ಭಾರತ ತಂಡಕ್ಕೆ ಕೊನೇ ಲೀಗ್ ಪಂದ್ಯದಲ್ಲಿ ನಮೀಬಿಯ ವಿರುದ್ಧ ಗೆದ್ದು ರನ್‌ರೇಟ್ ಲೆಕ್ಕಾಚಾರದಲ್ಲಿ ಉಪಾಂತ್ಯಕ್ಕೇರುವ ಅವಕಾಶವಿರುತ್ತಿತ್ತು.

ಅಫ್ಘಾನಿಸ್ತಾನ: 8 ವಿಕೆಟ್‌ಗೆ 124 (ಜಜೈ 2, ಶಹಜಾದ್ 4, ನೈಬ್ 15, ನಜಿಬುಲ್ಲಾ 73, ನಬಿ 14, ಬೌಲ್ಟ್ 17ಕ್ಕೆ 3, ಸೌಥಿ 24ಕ್ಕೆ 2, ಮಿಲ್ನೆ 17ಕ್ಕೆ 1, ನೀಶಾಮ್ 24ಕ್ಕೆ 1, ಸೋಧಿ 13ಕ್ಕೆ 1). ನ್ಯೂಜಿಲೆಂಡ್: 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 125 (ಗುಪ್ಟಿಲ್ 28, ಮಿಚೆಲ್ 17, ಕೇನ್ ವಿಲಿಯಮ್ಸನ್ 40*, ಕಾನ್‌ವೇ 36*, ಮುಜೀಬ್ 31ಕ್ಕೆ 1, ರಶೀದ್ ಖಾನ್ 27ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net