ಅಂದು ಐಪಿಎಲ್​ ಹರಾಜಿನಲ್ಲಿ ಸೋಲ್ಡ್​ ಆಗಲೇ ಇಲ್ಲ ಆದರೆ ಇಂದು LSG ಪಾಲಿಗೆ ಆತನೇ ಹೀರೋ ಆದ!

LSG
Published on

LSG : ನಿನ್ನೆ (ಮಾರ್ಚ್​ 27) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ನಡೆದ ಐಪಿಎಲ್​ ಪಂದ್ಯದಲ್ಲಿ ಲಖನೌ ಭರ್ಜರಿ ಜಯ ದಾಖಲಿಸುವ ಮೂಲಕ ಮೆಗಾ ಟೂರ್ನಿಯಲ್ಲಿ ಮೊದಲ ಗೆಲುವಿನ ಖುಷಿ ಉಂಡಿತು.

ಟಾಸ್ ಗೆದ್ದ ಲಖನೌ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಳಿಕ ಬ್ಯಾಟಿಂಗ್​ ಆರಂಭಿಸಿದ ಎಸ್‌ಆರ್‌ಎಚ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ಕಳೆದ ಪಂದ್ಯದ ಶತಕದ ವೀರ ಇಶಾನ್ ಕಿಶನ್ ಈ ಬಾರಿ ಖಾತೆ ತೆರೆಯದೆಯೇ ಗೋಲ್ಡನ್ ಡಕ್ ಆದರು. ಆರಂಭಿಕರಾದ ಅಭಿಷೇಕ್ ಶರ್ಮ 6 ಎಸೆತಗಳನ್ನು ಎದುರಿಸಿ ಕೇವಲ ಆರು ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಟ್ರಾವಿಸ್​ ಹೆಡ್​ ಎಂದಿನಂತೆ ತನ್ನ ಬ್ಯಾಟಿಂಗ್​ ದಾಳಿ ಆರಂಭಿಸಿದ್ದರು. ಆದರೆ, 47 ರನ್​ಗಳ ಉತ್ತಮ ಕಾಣಿಕೆ ನೀಡಿ ವಿಕೆಟ್​ ಒಪ್ಪಿಸಿದರು. ಆ ನಂತರ ನಿತೀಶ್ ಕುಮಾರ್ ರೆಡ್ಡಿ, ಕ್ಲಾಸೆನ್ ಮತ್ತು ಅಂಕಿತ್ ವರ್ಮಾ ಗಮನಾರ್ಹ ರನ್ ಗಳಿಸಿ, ಎಸ್‌ಆರ್‌ಹೆಚ್ ಸವಾಲಿನ ಸ್ಕೋರ್ ಗಳಿಸಲು ಅವಕಾಶ ಮಾಡಿಕೊಟ್ಟರು.

ಇನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ತಂಡ ಶಾರ್ದೂಲ್ ಠಾಕೂರ್ ಅವರನ್ನು ಖರೀದಿಸಲಿಲ್ಲ. ಆದರೆ, ಅದೃಷ್ಟವಶಾತ್, ಲಖನೌ ತಂಡದ ಬೌಲರ್‌ಗಳು ಗಾಯಗೊಂಡ ನಂತರ ಶಾರ್ದೂಲ್​ಗೆ ತಂಡದಿಂದ ಕರೆ ಬಂದಿತು. ನಿನ್ನೆಯ ಪಂದ್ಯದಲ್ಲಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಶಾರ್ದೂಲ್ ಠಾಕೂರ್, ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಗ್ಗುಲು ಮುಳ್ಳಾಗಿ ಕಾಡಿದರು.

ಹೌದು, ನಿನ್ನೆಯ ಪಂದ್ಯದಲ್ಲಿ ಠಾಕೂರ್ 4 ಓವರ್‌ಗಳಲ್ಲಿ 34 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಹೈದರಾಬಾದ್ ಬ್ಯಾಟಿಂಗ್ ಲೈನ್‌ಅಪ್‌ಗೆ ಹಾನಿ ಮಾಡಿದರು. ಈ ಮಾರಕ ಬೌಲಿಂಗ್​ ದಾಳಿಯೊಂದಿಗೆ ಠಾಕೂರ್​ ಅವರು ಪ್ರಸ್ತುತ ಋತುವಿನ ನಂಬರ್ ಒನ್ ಬೌಲರ್ ಆಗಿದ್ದಾರೆ. ಲಖನೌ ತಂಡದ ಪರ ಆಡಿದ ಮೊದಲ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ ನಂತರ, ಅವರು ನಿನ್ನೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ, ಒಟ್ಟು ಎರಡು ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಲುಪಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net