

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಹೈದರಾಬಾದ್‌ನಲ್ಲಿ 2018ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಗಾಯದಿಂದಾಗಿ ಕೇವಲ 10 ಎಸೆತ ಎಸೆದು ಪಂದ್ಯದಿಂದ ಹೊರಬಿದ್ದಿದ್ದ ಮುಂಬೈ ವೇಗಿ ಶಾರ್ದೂಲ್ ಠಾಕೂರ್, ಆಸ್ಟ್ರೇಲಿಯಾ ಪ್ರವಾಸದ ನಿರ್ಣಾಯಕ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಮರಳಿ ಕಣಕ್ಕಿಳಿಯುವ ಅವಕಾಶ ಪಡೆದರು. ಈ ವೇಳೆ ಬರೀ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಮಿಂಚಿ ಸರ್ವಾಂಗೀಣ ನಿರ್ವಹಣೆ ತೋರಿದರು.
ಮೊದಲ ಇನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಜತೆ ಅವರು ನಡೆಸಿದ ಶತಕದ ಜತೆಯಾಟ ಭಾರತಕ್ಕೆ ಪಂದ್ಯಕ್ಕೆ ಮರಳುವ ಅವಕಾಶವನ್ನೂ ಕಲ್ಪಿಸಿಕೊಟ್ಟಿತು. ಬಿರುಸಿನ ಆಟದ ಮೂಲಕ 67 ರನ್ ಸಿಡಿಸಿದ ಅವರ ಇನಿಂಗ್ಸ್ ವೇಳೆ ಕೆಲ ಆಕರ್ಷಕ ಕವರ್‌ಡ್ರೈವ್ ಮತ್ತು ಫ್ಲಿಕ್‌ಗಳ ಮೂಲಕ ಗಮನಸೆಳೆದರು. ಈ ಮೂಲಕ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ನೆನಪಿಸಿರುವುದಕ್ಕಾಗಿ ಅವರಿಗೆ ಈಗ ಟೀಮ್ ಇಂಡಿಯಾದಲ್ಲಿ ‘ಶಾರ್ದೂಲ್ಕರ್’ ಎಂದೇ ಅನ್ವರ್ಥನಾಮ ನೀಡಲಾಗಿದೆ.
‘ತೆಂಡುಲ್ಕರ್ ಬಳಿಕ ನಾವು ಶಾರ್ದೂಲ್ ಅವರೇ ಅಷ್ಟೊಂದು ಆಕರ್ಷಕವಾಗಿ ಕವರ್‌ಡ್ರೈವ್ ಮಾಡಿರುವುದನ್ನು ನೋಡಿರುವುದು. ಇದಕ್ಕಾಗಿ ಅವರಿಗೆ ಶಾರ್ದೂಲ್ಕರ್ ಎಂಬ ಹೊಸ ನಿಕ್‌ನೇಮ್ ನೀಡಿದ್ದೇವೆ’ ಎಂದು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಬಹಿರಂಗಪಡಿಸಿದ್ದಾರೆ. ಮುಂಬೈನವರೇ ಆದ ಶಾರ್ದೂಲ್ ಠಾಕೂರ್ ಅವರು ಈ ಹಿಂದೆ ಟೀಮ್ ಇಂಡಿಯಾ ಪರ ಆಡುವಾಗ ಸಚಿನ್ ತೆಂಡುಲ್ಕರ್ ಅವರ ‘10’ ನಂಬರ್ ಜೆರ್ಸಿ ಬಳಸಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ಟೀಕೆಗೆ ಗುರಿಯಾಗಿದ್ದರು.
ಕ್ರಿಕೆಟಿಗರಿಗೆ ಶ್ರೇಯಸ್ಸು ಸಲ್ಲಬೇಕೆಂದ ದ್ರಾವಿಡ್
ಭಾರತ ಎ ಮತ್ತು 19 ವಯೋಮಿತಿ ತಂಡದ ಕೋಚ್ ಆಗಿ ಅಪೂರ್ವ ಕೆಲಸ ನಿರ್ವಹಿಸಿದ ದಿಗ್ಗಜ ರಾಹುಲ್ ದ್ರಾವಿಡ್ ಅವರಿಗೆ, ಭಾರತ ತಂಡ ಆಸೀಸ್ ನೆಲದಲ್ಲಿ ಅಮೋಘ ಯಶಸ್ಸಿನ ಶ್ರೇಯವನ್ನು ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಲ್ಲಿಸುತ್ತಿದ್ದಾರೆ. ಆದರೆ ದ್ರಾವಿಡ್ ಸ್ವತಃ ಈ ಶ್ರೇಯವನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ‘ನನಗಿದು ಅನಗತ್ಯ ಶ್ರೇಯ. ಆಟಗಾರರೇ ಎಲ್ಲ ಶ್ರೇಯಗಳಿಗೆ ಅರ್ಹರು’ ಎಂದು ದ್ರಾವಿಡ್ ಎಂದಿನ ವಿನಯತೆ ಮೆರೆದಿದ್ದಾರೆ.