

ರಾವಲ್ಪಿಂಡಿ: ಈ ಹಿಂದೆ ಎರಡು ಪಂದ್ಯಗಳ ಮೊದಲ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್ಗಳ ಅಂತರದಿಂದ ಹೀನಾಯವಾಗಿ ಸೋತ ಪಾಕಿಸ್ತಾನ (Pakistan), ತಮ್ಮನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ, ಈ ಹಿಂದೆ ನಡೆದ 13 ಮ್ಯಾಚ್ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ (Shan Masood Team) ಬೆವರಿಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸಿತು. ಈ ಹೀನಾಯ ಸೋಲಿನಿಂದ ವ್ಯಾಪಕ ಟೀಕೆ, ಛೀಮಾರಿಗೆ ಗುರಿಯಾಗಿದ್ದ ಪಾಕ್, ಇದೀಗ ಮತ್ತೊಮ್ಮೆ ಪಾಕಿಸ್ತಾನ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದೆ.
ಮುಲ್ತಾನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಕ್ರಿಕೆಟ್ ಪಂದ್ಯದ ಐದನೇ ಮತ್ತು ಅಂತಿಮ ದಿನವಾದ ಇಂದು ಪಾಕಿಸ್ತಾನವನ್ನು ಬಗ್ಗುಬಡಿದ ಆಂಗ್ಲರ ಪಡೆ, 47 ರನ್‌ಗಳ ಅಂತರದಿಂದ ಪಾಕ್ಗೆ ಹೀನಾಯ ಸೋಲಿನ ರುಚಿಯನ್ನು ತೋರಿಸಿತು. ಕ್ರಿಕೆಟ್ ಇತಿಹಾಸದಲ್ಲೇ ಇಂತಹ ಸೋಲನ್ನು ಎಂದಿಗೂ ಕಾಣದ ಪಾಕಿಸ್ತಾನ, 500 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿದ್ದರು ಸಹ ಸೋಲುಂಡಿದ್ದು ಇದೀಗ ಮರೆಯಲಾಗದ ಕ್ಷಣವಾಗಿ ಮಾರ್ಪಟ್ಟಿದೆ. ಟೆಸ್ಟ್ ನಾಯಕತ್ವದಲ್ಲಿ ಸತತ 6ನೇ ಬಾರಿಗೆ ಇಂಥ ಸೋಲು ಅನುಭವಿಸಿದ ಕ್ಯಾಪ್ಟನ್ ಎಂಬ ಪಟ್ಟಕ್ಕೆ ಸದ್ಯ ಶಾನ್ ಮಸೂದ್ ಗುರಿಯಾಗಿದ್ದಾರೆ.
ಕಳೆದ ವರ್ಷ ಪಾಕಿಸ್ತಾನ ಟೆಸ್ಟ್ ತಂಡಕ್ಕೆ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡ ಶಾನ್ ಮಸೂದ್, ಸತತ ಆರನೇ ಟೆಸ್ಟ್‌ನಲ್ಲಿಯೂ ಹೀನಾಯ ಸೋಲನ್ನು ಅನುಭವಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಫೆಬ್ರವರಿ 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿದ್ದೇ ಕೊನೆಯ ಜಯ. ಇಲ್ಲಿಯವರೆಗೂ ಆಡಿರುವ 11 ಟೆಸ್ಟ್ ಪಂದ್ಯಗಳಲ್ಲಿ ಇದು ಪಾಕಿಸ್ತಾನದ ಏಳನೇ ಸೋಲು ಎಂಬುದು ಗಮನಾರ್ಹ. ಮುಂದಿನ ಮಂಗಳವಾರದಿಂದ ಮುಲ್ತಾನ್‌ನಲ್ಲಿ ಎರಡನೇ ಟೆಸ್ಟ್ ಆರಂಭವಾಗಲಿದ್ದು, ಅಂತಿಮ ಟೆಸ್ಟ್ ರಾವಲ್ಪಿಂಡಿಯಲ್ಲಿ ಇದೇ ಅಕ್ಟೋಬರ್ 24ರಂದು ನಡೆಯಲಿದೆ,(ಏಜೆನ್ಸೀಸ್).