ಖೇಲ್​ರತ್ನಕ್ಕೆ ಸಾತ್ವಿಕ್​-ಚಿರಾಗ್​ ಹೆಸರು ಶಿಫಾರಸು; ಅರ್ಜುನ ಪ್ರಶಸ್ತಿ ರೇಸ್​ನಲ್ಲಿ ಕ್ರಿಕೆಟಿಗ ಮೊಹಮದ್​ ಶಮಿ

award web
Published on

ನವದೆಹಲಿ: ಪುರುಷರ ಡಬಲ್ಸ್​ ಬ್ಯಾಡ್ಮಿಂಟನ್​ ಜೋಡಿಯಾದ ಸಾತ್ವಿಕ್​ ಸಾಯಿರಾಜ್​ ಮತ್ತು ಉಡುಪಿ ಮೂಲದ ಚಿರಾಗ್​ ಶೆಟ್ಟಿ ಹೆಸರು ಮೇಜರ್​ ಧ್ಯಾನ್​ಚಂದ್​ ಖೇಲ್​ರತ್ನ ಪ್ರಶಸ್ತಿಗೆ ಶಿಫಾರಸುಗೊಂಡಿದೆ. ಏಕದಿನ ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್​ ಕಬಳಿಸಿ ಮಿಂಚಿದ ಟೀಮ್​ ಇಂಡಿಯಾದ ವೇಗಿ ಮೊಹಮದ್​ ಶಮಿ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ.

33 ವರ್ಷದ ಶಮಿ ಹೆಸರನ್ನು ಬಿಸಿಸಿಐ ಮೊದಲಿಗೆ ಪ್ರಶಸ್ತಿಗೆ ಶಿಫಾರಸು ಮಾಡಿರಲಿಲ್ಲ. ಆದರೆ ವಿಶ್ವಕಪ್​ನಲ್ಲಿ ಅಮೋಘ ನಿರ್ವಹಣೆಯ ಬಳಿಕ ಕೊನೇಕ್ಷಣದಲ್ಲಿ ಶಮಿ ಹೆಸರನ್ನು ವಿಶೇಷ ಮನವಿಯೊಂದಿಗೆ ಸಲ್ಲಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ. ಶಮಿ ವಿಶ್ವಕಪ್​ನಲ್ಲಿ 7 ಪಂದ್ಯಗಳಲ್ಲೇ 24 ವಿಕೆಟ್​ ಕಬಳಿಸಿದ್ದರು. ಶಮಿ ಜತೆಗೆ ಇತರ 16 ಕ್ರೀಡಾಪಟುಗಳ ಹೆಸರು ಕೂಡ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದೆ. ದ್ರೋಣಾಚಾರ್ಯ ಪ್ರಶಸ್ತಿಗೆ ಐವರು ಕೋಚ್​ಗಳು ಮತ್ತು ಧ್ಯಾನ್​ಚಂದ್​ ಜೀವಮಾನ ಸಾಧನೆ ಪ್ರಶಸ್ತಿಗೆ ಮೂವರು ಹೆಸರು ಶಿಫಾರಸುಗೊಂಡಿದೆ ಎನ್ನಲಾಗಿದೆ. 12 ಸದಸ್ಯರ ಆಯ್ಕೆ ಸಮಿತಿ ಶೀಘ್ರದಲ್ಲೇ ಪ್ರಶಸ್ತಿ ಪುರಸತರ ಹೆಸರು ಅಂತಿಮಗೊಳಿಸುವ ನಿರೀಕ್ಷೆ ಇದೆ.

ಕ್ರೀಡಾ ಪ್ರಶಸ್ತಿಗೆ ಶಿಫಾರಸುಗೊಂಡವರು: ಮೇಜರ್​ ಧ್ಯಾನ್​ಚಂದ್​ ಖೇಲ್​ರತ್ನ: ಸಾತ್ವಿಕ್​ ಸಾಯಿರಾಜ್​, ಚಿರಾಗ್​ ಶೆಟ್ಟಿ (ಬ್ಯಾಡ್ಮಿಂಟನ್​); ಅರ್ಜುನ ಪ್ರಶಸ್ತಿ: ಮೊಹಮದ್​ ಶಮಿ (ಕ್ರಿಕೆಟ್​), ಅಜಯ್​ ರೆಡ್ಡಿ (ಅಂಧರ ಕ್ರಿಕೆಟ್​), ಓಜಸ್​ ಪ್ರವಿಣ್​ ದೇವತಾಲ್​, ಅದಿತಿ ಗೋಪಿಚಂದ್​ ಸ್ವಾಮಿ (ಆರ್ಚರಿ), ಶೀತಲ್​ ದೇವಿ (ಪ್ಯಾರಾ ಆರ್ಚರಿ), ಪಾರುಲ್​ ಚೌಧರಿ, ಮುರಳಿ ಶ್ರೀಶಂಕರ್​ (ಅಥ್ಲೆಟಿಕ್ಸ್​), ಮಹಮದ್​ ಹಸಮುದ್ದೀನ್​ (ಬಾಕ್ಸಿಂಗ್​), ಆರ್​. ವೈಶಾಲಿ (ಚೆಸ್​), ದಿವ್ಯಾಕೃತಿ ಸಿಂಗ್​, ಆಂಶು ಅಗರ್ವಾಲ್​ (ಈಕ್ವೆಸ್ಟ್ರಿಯನ್​), ದೀಕ್ಷಾ ದಾಗರ್​ (ಗಾಲ್ಫ್​), ಕೃಷ್ಣ ಬಹದೂರ್​ ಪಾಠಕ್​, ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್​ ಬಾಲ್​), ಐಶ್ವರಿ ಪ್ರತಾಪ್​ ಸಿಂಗ್​ ತೋಮರ್​ (ಶೂಟಿಂಗ್​), ಅಂತಿಮ್​ ಪಾಂಗಲ್​ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್​ ಟೆನಿಸ್​), ರೋಶಿಬಿನಾ ದೇವಿ (ವುಶು); ಧ್ಯಾನ್​ಚಂದ್​ ಜೀವಮಾನ ಸಾಧನೆ: ಕವಿತಾ (ಕಬಡ್ಡಿ), ಮಂಜುಷಾ ಕನ್ವರ್​ (ಬ್ಯಾಡ್ಮಿಂಟನ್​), ವಿನೀತ್​ ಕುಮಾರ್​ ಶರ್ಮ (ಹಾಕಿ); ದ್ರೋಣಾಚಾರ್ಯ: ಗಣೇಶ್​ ಪ್ರಭಾಕರನ್​ (ಮಲ್ಲಕಂಬ), ಮಹಾವೀರ್​ ಸೈನಿ (ಪ್ಯಾರಾ ಅಥ್ಲೆಟಿಕ್ಸ್​), ಲಲಿತ್​ ಕುಮಾರ್​ (ಕುಸ್ತಿ), ಆರ್​ಬಿ ರಮೇಶ್​ (ಚೆಸ್​), ಶಿವೇಂದ್ರ ಸಿಂಗ್​ (ಹಾಕಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net