

Shakib Al Hasan : ಬಾಂಗ್ಲಾದೇಶದ ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಇತ್ತೀಚಿನ ದಿನಗಳಲ್ಲಿ ಪದೇಪದೆ ತೊಂದರೆಗೆ ಸಿಲುಕುತ್ತಿದ್ದಾರೆ. 2024ರ ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಕ್ರಿಕೆಟ್ ಪಂದ್ಯದಲ್ಲಿ ಶಕೀಬ್ ಅವರ ಬೌಲಿಂಗ್ ಶೈಲಿ ಕಾನೂನುಬಾಹಿರವಾಗಿದೆ ಎಂಬ ದೂರುಗಳು ಬಂದಿತ್ತು. ಈ ಘಟನೆಯ ನಂತರ ಬೌಲಿಂಗ್ನಿಂದ ಶಕೀಬ್ರನ್ನು ನಿಷೇಧಿಸಲಾಗಿದೆ.
ಈಗಾಗಲೇ ಎರಡು ಬಾರಿ ಬೌಲಿಂಗ್ ಶೈಲಿ ಪರೀಕ್ಷೆಯಲ್ಲಿ ವಿಫಲರಾಗಿರುವ ಶಕೀಬ್‌ಗೆ ಈ ನಿಷೇಧವು ಒಂದು ದೊಡ್ಡ ಹೊಡೆತವಾಗಿದೆ. ನಿಷೇಧದ ಪರಿಣಾಮ ಚಾಂಪಿಯನ್ಸ್ ಟ್ರೋಫಿಗಾಗಿ ಬಾಂಗ್ಲಾದೇಶ ತಂಡದಲ್ಲಿ ಶಕೀಬ್‌ಗೆ ಸ್ಥಾನ ಸಿಗಲಿಲ್ಲ. ಇದರ ಬೆನ್ನಲ್ಲೇ ಶಕೀಬ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಐಎಫ್‌ಐಸಿ ಬ್ಯಾಂಕ್‌ಗೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಕೀಬ್ ವಿರುದ್ಧ ಢಾಕಾದ ನ್ಯಾಯಾಲಯವು ಬಂಧನ ವಾರಂಟ್ ಅನ್ನು ಹೊರಡಿಸಿದೆ.
ಢಾಕಾದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಿಯಾದೂರ್ ರೆಹಮಾನ್ ಅವರು ಭಾನುವಾರ (ಜ.19) ಶಕೀಬ್ ಅಲ್ ಹಸನ್ ಮತ್ತು ಇತರ ಮೂವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದಾರೆ. ಐಎಫ್‌ಐಸಿ ಬ್ಯಾಂಕ್ ಅಧಿಕಾರಿ ಶಹೀಬುರ್ ರೆಹಮಾನ್ ಎಂಬುವರು ದಾಖಲಿಸಿದ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಬಂಧನ ವಾರೆಂಟ್ ಜಾರಿ ಮಾಡಿದೆ.
ಶಕೀಬ್ ಅವರು ಎರಡು ಚೆಕ್‌ಗಳ ಮೂಲಕ ಸುಮಾರು 41.4 ಮಿಲಿಯನ್ ಟಕಾ ಅಥವಾ ಭಾರತೀಯ ಕರೆನ್ಸಿಯಲ್ಲಿ ಸುಮಾರು 3 ಕೋಟಿ ರೂಪಾಯಿಗಳನ್ನು ಪಾವತಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಂದಹಾಗೆ ಶಕೀಬ್ ಅವರ ಕಂಪನಿ "ಅಲ್ ಹಸನ್ ಆಗ್ರೋ ಫಾರ್ಮ್ ಲಿಮಿಟೆಡ್" ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಘಾಜಿ ಶಗೀರ್ ಹುಸೇನ್ ಮತ್ತು ನಿರ್ದೇಶಕರಾದ ಇಮ್ದಾದುಲ್ ಹಕ್ ಮತ್ತು ಮಲೈಕರ್ ಬೇಗಂ ಅವರ ಹೆಸರುಗಳು ಸಹ ಪ್ರಕರಣದಲ್ಲಿ ಕೇಳಿಬರುತ್ತಿವೆ.
ಪ್ರಸ್ತುತ ವಿದೇಶದಲ್ಲಿರುವ ಶಕೀಬ್, ಬಾಂಗ್ಲಾದೇಶಕ್ಕೆ ಮರಳಲು ನಿರಾಕರಿಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಅಶಾಂತಿ, ಭದ್ರತಾ ಸಮಸ್ಯೆಗಳು ಮತ್ತು ಕಾನೂನು ಪ್ರಕ್ರಿಯೆಗಳಿಂದಾಗಿ ಅವರು ದೇಶಕ್ಕೆ ಹಿಂತಿರುಗುತ್ತಿಲ್ಲ ಎಂದು ವರದಿಯಾಗಿದೆ. ಶಕೀಬ್ ಅವರ ಕುಟುಂಬವು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದು, ಅವರು ಬಾಂಗ್ಲಾದೇಶಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ನಂಬಲಾಗಿದೆ. (ಏಜೆನ್ಸೀಸ್)