ಅಫ್ರಿದಿ ಮಗಳನ್ನು ಮದುವೆಯಾಗಲಿರುವ ಪಾಕ್ ಕ್ರಿಕೆಟಿಗನ ಹೆಸರು ಬಹಿರಂಗ

afridi web
Published on

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಲ್ರೌಂಡರ್ ಶಾಹಿದ್ ಅಫ್ರಿದಿ ಅವರು ತಮ್ಮ ಹಿರಿಯ ಪುತ್ರಿಯ ವಿವಾಹವನ್ನು ಹಾಲಿ ಪಾಕಿಸ್ತಾನ ತಂಡದ ಆಟಗಾರನೊಬ್ಬನ ಜತೆ ಮಾಡಲಿದ್ದಾರೆ ಎಂದು ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಶಾಹಿದ್ ಅಫ್ರಿದಿ, ಪಾಕಿಸ್ತಾನ ತಂಡದ ವೇಗಿ ಶಹೀನ್ ಷಾ ಅಫ್ರಿದಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಪುತ್ರಿಯ ವಿದ್ಯಾಭ್ಯಾಸದಿಂದಾಗಿ ವಿವಾಹ ಸ್ವಲ್ಪ ಸಮಯ ವಿಳಂಬವಾಗಬಹುದು ಎಂಬ ಸುಳಿವನ್ನೂ ನೀಡಿದ್ದಾರೆ.

ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ 44 ವರ್ಷದ ಅಫ್ರಿದಿ, ಶಹೀನ್ ಷಾ ಅಫ್ರಿದಿ ತಮ್ಮ ಅಳಿಯ ಆಗಲಿರುವುದನ್ನು ದೃಢಪಡಿಸಿದ್ದಾರೆ. ಜತೆಗೆ ತಮ್ಮ ಮಗಳು ಅನ್ಶಾ ಅಫ್ರಿದಿ ಡಾಕ್ಟರ್ ಆಗುವ ಕನಸು ಹೊಂದಿರುವುದಾಗಿಯೂ ತಿಳಿಸಿದ್ದಾರೆ. ಈಗಾಗಲೆ ಕಾಲೇಜು ವಿದ್ಯಾಭ್ಯಾಸದಲ್ಲಿರುವ ಅನ್ಶಾ ಅಫ್ರಿದಿ, ಮುಂದಿನ ದಿನಗಳಲ್ಲಿ ಪಾಕಿಸ್ತಾನ ಅಥವಾ ಇಂಗ್ಲೆಂಡ್‌ನಲ್ಲಿ ಉನ್ನತ ವ್ಯಾಸಂಗ ಮಾಡಬಹುದು ಎಂದು ಹೇಳಿದ್ದಾರೆ.

ಶಹೀನ್ ಷಾ ಅಫ್ರಿದಿ ಕೂಡ ಅಫ್ರಿದಿ ಮನೆತನಕ್ಕೆ ಸೇರಿದವರು. ಆದರೆ ಮದುವೆ ನಿಶ್ಚಯವಾಗುವುದಕ್ಕೆ ಮುನ್ನ ತಮ್ಮ ಪುತ್ರಿ ಮತ್ತು ಶಹೀನ್ ನಡುವೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಅಫ್ರಿದಿ, ಶಹೀನ್ ಕುಟುಂಬ ತಮ್ಮ ಕುಟುಂಬವನ್ನು ಸಂಪರ್ಕಿಸಿ ಮಗಳನ್ನು ಯಾಚಿಸಿದ್ದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ. ಅಲ್ಲಾಹ್ ಬಯಸಿದರೆ ಈ ಮದುವೆಯೂ ನಡೆಯುತ್ತದೆ. ಶಹೀನ್ ಕ್ರಿಕೆಟ್ ಮೈದಾನದಲ್ಲಿ ಇದೇ ರೀತಿಯ ಯಶಸ್ಸು ಮುಂದುವರಿಸಲಿ ಎಂದೂ ಅಫ್ರಿದಿ ಹೇಳಿದ್ದರು.

21 ವರ್ಷದ ಎಡಗೈ ವೇಗಿ ಶಹೀನ್ ಷಾ ಅಫ್ರಿದಿ ಇದುವರೆಗೆ ಪಾಕ್ ಪರ 17 ಟೆಸ್ಟ್, 25 ಏಕದಿನ ಮತ್ತು 25 ಟಿ20 ಪಂದ್ಯ ಆಡಿದ್ದು, ಕ್ರಮವಾಗಿ 58, 51 ಮತ್ತು 27 ವಿಕೆಟ್ ಕಬಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net