ಅಲ್ಲೊಂದು ಕೊಳೆತ ಮೊಟ್ಟೆ ಇದೆ...ಟೀಮ್​ ಇಂಡಿಯಾ ಮಾಜಿ ಆಟಗಾರನ ವಿರುದ್ಧ ನಾಲಿಗೆ ಹರಿಬಿಟ್ಟ ಅಫ್ರಿದಿ! Shahid Afridi

Shahid Afridi
Published on

Shahid Afridi : ಜುಲೈ 20ರ ಭಾನುವಾರದಂದು ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯಬೇಕಿದ್ದ ಪಂದ್ಯದಿಂದ ಟೀಮ್​ ಇಂಡಿಯಾ ಹಿಂದೆ ಸರಿದಿದ್ದು ಗೊತ್ತೇ ಇದೆ. ಪಹಲ್ಗಾಮ್​ ಮೇಲೆ ಉಗ್ರರ ದಾಳಿಯ ಬಳಿ ಭಾರತ ಮತ್ತು ಪಾಕ್​ ನಡುವಿನ ಉದ್ವಿಗ್ನತೆಯ ಸಂದರ್ಭದಲ್ಲಿ ಭಾರತದ ವಿರುದ್ಧ ಪಾಕ್​ ತಂಡ ಮಾಜಿ ನಾಯಕ ಶಾಹಿದ್​ ಅಫ್ರಿದಿ ನಾಲಿಗೆ ಹರಿಬಿಟ್ಟರು. ಈ ವೇಳೆ ಅವರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಒಂದು ಹಂತದಲ್ಲಿ ಟೀಮ್​ ಇಂಡಿಯಾ ಮಾಜಿ ಆರಂಭಿಕ ಆಟಗಾರ ಶಿಖರ್​ ಧವನ್​ ಮತ್ತು ಅಫ್ರಿದಿ ಜಾಲತಾಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದರು. ಇದೆಲ್ಲವನ್ನು ಪರಿಗಣಿಸಿ, ಭಾರತದ ಆಟಗಾರರು ಪಾಕ್​ ವಿರುದ್ಧ ಆಡಲು ನಿರಾಕರಿಸಿದರು. ಕೊನೆಗೆ ಆ ಪಂದ್ಯವೇ ರದ್ದಾಯಿತು. ಈ ವಿಚಾರವಾಗಿ ಇದೀಗ ಅಫ್ರಿದಿ ಮಾತನಾಡಿದ್ದಾರೆ.

ಭಾನುವಾರ (ಜುಲೈ 20) ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಹಿದ್ ಅಫ್ರಿದಿ, ಭಾರತೀಯ ಕ್ರಿಕೆಟಿಗರು ಸಹ ಪಂದ್ಯವನ್ನು ಆಡದಿದ್ದಕ್ಕೆ ನಿರಾಶೆಗೊಂಡಿದ್ದಾರೆ ಎಂದರು. ಇದೇ ವೇಳೆ ಅವರು ಶಿಖರ್ ಧವನ್ ಅವರನ್ನು ದೂಷಿಸಿದರು. ಏಕೆಂದರೆ, ಅಫ್ರಿದಿ ಪಾಕಿಸ್ತಾನ ತಂಡದ ಭಾಗವಾಗಿ ಆಡಿದರೆ, ಆ ಪಂದ್ಯವನ್ನು ನಾನು ಆಡುವುದಿಲ್ಲ ಎಂದು ಧವನ್​ ಸಾರ್ವಜನಿಕವಾಗಿ ಘೋಷಿಸಿದ್ದರು. ಹೀಗಾಗಿ ಅಫ್ರಿದಿ, ಧವನ್​ ವಿರುದ್ಧ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.

ಧವನ್ ಅವರನ್ನು 'ಕೊಳೆತ ಮೊಟ್ಟೆ' ಎಂದು ಕರೆದಿರುವ ಅಫ್ರಿದಿ, ಉಳಿದ ಭಾರತೀಯ ಕ್ರಿಕೆಟಿಗರನ್ನು 'ಹಾಳು' ಮಾಡಿದ್ದಾರೆಂದು ಧವನ್​ರನ್ನು ದೂಷಿಸಿದರು.

ಪ್ರತಿಯೊಂದು ಕ್ರೀಡೆ ದೇಶಗಳನ್ನು ಹತ್ತಿರ ತರುತ್ತವೆ. ಹೀಗಿರುವಾಗ ಎಲ್ಲದರಲ್ಲೂ ರಾಜಕೀಯ ತಂದರೆ ನೀವು ಹೇಗೆ ಮುಂದುವರಿಯುತ್ತೀರಿ? ಮಾತುಕತೆ ಇಲ್ಲದೆ ಯಾವುದೇ ವಿಷಯಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳ ಉದ್ದೇಶ ಒಬ್ಬರಿಗೊಬ್ಬರು ಭೇಟಿಯಾಗುವುದು. ಆದರೆ ನಿಮಗೆ ತಿಳಿದಿದೆ, ಯಾವಾಗಲೂ ಒಂದು ಕೊಳೆತ ಮೊಟ್ಟೆ ಇರುತ್ತದೆ, ಅದು ಎಲ್ಲವನ್ನೂ ಹಾಳು ಮಾಡುತ್ತದೆ ಎಂದು ಶಾಹಿದ್ ಅಫ್ರಿದಿ, ಧವನ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾತು ಮುಂದುವರಿಸಿದ ಅಫ್ರಿದಿ, ಧವನ್ ತಮ್ಮ ದೇಶಕ್ಕೆ ಮುಜುಗರ ತಂದಿದ್ದಾರೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ಬೆಂಕಿಗೆ ತುಪ್ಪ ಸುರಿದರು. 2025ರ WCL ನಲ್ಲಿ ಆಡಲು ಬಯಸದಿದ್ದರೆ ಭಾರತೀಯ ತಂಡ ಮನೆಯಲ್ಲೇ ಇರಬೇಕಿತ್ತು. ಅವರೆಲ್ಲ ಪಂದ್ಯಕ್ಕೆ ಒಂದು ದಿನ ಮೊದಲೇ ತರಬೇತಿ ಪಡೆದರು. ಆದರೆ, ಒಬ್ಬ ವ್ಯಕ್ತಿಯ ಕಾರಣದಿಂದಾಗಿ ಅವರು ಪಂದ್ಯದಿಂದ ಹಿಂದೆ ಸರಿದಿದ್ದಾರೆಂದು ನಾನು ಭಾವಿಸುತ್ತೇನೆ. ಇದರಿಂದ ಭಾರತೀಯ ತಂಡ ಕೂಡ ತುಂಬಾ ನಿರಾಶೆಗೊಂಡಿದೆ. ನಾನು ನಿಮಗೆ ಹೇಳುತ್ತಿದ್ದೇನೆ, ನೀವು ದೇಶಕ್ಕೆ ಉತ್ತಮ ರಾಯಭಾರಿಯಾಗಿರಬೇಕೇ ಹೊರತು ಮುಜುಗರವಲ್ಲ ಎಂದು ಧವನ್​ರನ್ನು ಅಫ್ರಿದಿ ಟೀಕಿಸಿದರು.

ಶಾಹಿದ್ ಅಫ್ರಿದಿಯ ಡಬಲ್ ಸ್ಟಾಂಡರ್ಡ್ಸ್

ಅಂದಹಾಗೆ, ಕ್ರೀಡಾ ರಾಜತಾಂತ್ರಿಕತೆಯ ಬಗ್ಗೆ ಈಗ ಉದ್ದುದ್ದ ಮಾತುಗಳನ್ನಾಡುತ್ತಿರುವ ಅಫ್ರಿದಿ, ಕಳೆದ ಏಪ್ರಿಲ್ ತಿಂಗಳಲ್ಲಿ ಪಹಲ್ಗಾಮ್‌ನಲ್ಲಿ 26 ಅಮಾಯಕರನ್ನು ಉಗ್ರರು ಬಲಿ ಪಡೆದುಕೊಂಡಾಗ ಆಡಿದ ಮಾತುಗಳು ಅವರ ಇಬ್ಬಗೆಯ ನೀತಿಯನ್ನು ಪ್ರದರ್ಶಿಸುತ್ತದೆ. ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಒಂದು ಗಂಟೆ ಕಾಲ ಜನರನ್ನು ಕೊಲ್ಲುತ್ತಲೇ ಇದ್ದರು ಮತ್ತು 8 ಲಕ್ಷ ಜನರಲ್ಲಿ ಒಬ್ಬ ಭಾರತೀಯ ಸೈನಿಕನೂ ಬರಲಿಲ್ಲ. ಆದರೆ, ಆ ದಾಳಿಗೆ ಅವರು ಪಾಕಿಸ್ತಾನವನ್ನು ದೂಷಿಸಿದರು ಎಂದು ಪಹಲ್ಗಾಮ್​ ದಾಳಿಯ ಸಂದರ್ಭದಲ್ಲಿ ಅಫ್ರಿದಿ ಪಾಕಿಸ್ತಾನದಲ್ಲಿ ಸ್ಥಳೀಯ ವರದಿಗಾರರಿಗೆ ತಿಳಿಸಿದ್ದರು. ಭಾರತವು ಭಯೋತ್ಪಾದನೆಯನ್ನು ನಡೆಸುತ್ತದೆ, ತನ್ನದೇ ಜನರನ್ನು ಕೊಲ್ಲುತ್ತದೆ ಮತ್ತು ನಂತರ ಆ ಆರೋಪವನ್ನು ಪಾಕಿಸ್ತಾನದ ಮೇಲೆ ಹೊರಿಸುತ್ತದೆ ಎಂದು ನಾಲಿಗೆ ಹರಿಬಿಟ್ಟಿದ್ದರು.

ಇದೀಗ ಅಫ್ರಿದಿ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್‌ನ ರಾಯಭಾರಿಯಾಗಿ WCLಗೆ ಬಂದಿರುವುದಾಗಿ ಮತ್ತು ಎಡ್ಜ್‌ಬಾಸ್ಟನ್‌ನಲ್ಲಿ ಪಂದ್ಯ ನಡೆಯದಿದ್ದಕ್ಕಾಗಿ ತುಂಬಾ ನಿರಾಶೆಗೊಂಡಿರುವುದಾಗಿ ಹೇಳಿದ್ದಾರೆ. ಎರಡನೇ ಪಂದ್ಯವನ್ನು ಭಾರತದ ವಿರುದ್ಧ ಆಡಲು ನಾವು ತುಂಬಾ ಉತ್ಸುಕರಾಗಿದ್ದೆವು. ನಾವು ಮೈದಾನದಲ್ಲಿ ಇರುತ್ತೇವೆ ಎಂದು ಭಾವಿಸಿದ್ದೆ. ಆದರೆ, ನಾವು ಆಡದಿರುವುದು ತುಂಬಾ ನಿರಾಶಾದಾಯಕವಾಗಿದೆ. ಭಾರತ ತಂಡಕ್ಕೆ ನನ್ನ ಉಪಸ್ಥಿತಿಯಲ್ಲಿ ಸಮಸ್ಯೆಗಳಿವೆ ಎಂದು ತಿಳಿದಿದ್ದರೆ, ಭಾನುವಾರದ ಪಂದ್ಯದಿಂದ ತಾನು ಹಿಂದೆ ಸರಿಯುತ್ತಿದ್ದೆ. ಅವರು ನನಗಾಗಿ ಆಡದಿದ್ದರೆ, ನಾನು ಮನೆಯಲ್ಲೇ ಇರುತ್ತಿದ್ದೆ. ಕ್ರಿಕೆಟ್ ಮುಂದುವರಿಯಬೇಕಿತ್ತು. ಕ್ರಿಕೆಟ್ ಮುಂದೆ ಶಾಹಿದ್ ಅಫ್ರಿದಿ ಯಾರು? ಯಾರೂ ಇಲ್ಲ. ಅವರು (ಟೀಮ್​ ಇಂಡಿಯಾ) ಆಡಲು ಬಯಸದಿದ್ದರೆ ಅವರು ಇಲ್ಲಿಗೆ ಏಕೆ ಬಂದರು? ಮನೆಯಲ್ಲಿ ಕುಳಿತು ಆಟವಾಡಬೇಕಿತ್ತು ಎಂದರು.

ಅಂದಹಾಗೆ, ಡಬ್ಲ್ಯೂಸಿಎಲ್ 2025 ರಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವು ಆಪರೇಷನ್ ಸಿಂಧೂರ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಕ್ರಿಕೆಟ್ ಪಂದ್ಯವಾಗಬೇಕಿತ್ತು. ಆದಾಗ್ಯೂ, ನೆರೆಯ ರಾಜ್ಯದೊಂದಿಗಿನ ಗಡಿಯಾಚೆಗಿನ ಉದ್ವಿಗ್ನತೆಯ ನಡುವೆಯೂ ಪಾಕಿಸ್ತಾನ ಕ್ರಿಕೆಟಿಗರ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಕ್ಕೆ, ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಭಾರಿ ಟೀಕೆ ವ್ಯಕ್ತವಾದ ನಂತರ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net