ಲಂಡನ್​ನ ಇಸ್ಕಾನ್ ರೆಸ್ಟೋರೆಂಟ್​ ಒಳಗೆ ಚಿಕನ್​ ತಿಂದ ಯುವಕ: ವೈರಲ್​ ವಿಡಿಯೋಗೆ ಜನಾಕ್ರೋಶ! ISKCON

ISKCON
Published on

ISKCON : ಲಂಡನ್‌ನಲ್ಲಿರುವ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ಇಸ್ಕಾನ್) ಗೋವಿಂದ ರೆಸ್ಟೋರೆಂಟ್​ ಒಳಗೆ ವ್ಯಕ್ತಿಯೊಬ್ಬ ಫ್ರೈಡ್ ಚಿಕನ್ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಆಫ್ರಿಕನ್-ಬ್ರಿಟಿಷ್ ಮೂಲದ ವ್ಯಕ್ತಿಯೊಬ್ಬ ಇಸ್ಕಾನ್‌ನ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದದ ಆವರಣಕ್ಕೆ ಪ್ರವೇಶಿಸಿ, ಮಾಂಸ ಬಡಿಸುತ್ತೀರಾ ಎಂದು ಅಲ್ಲಿನ ಸಿಬ್ಬಂದಿಯನ್ನು ಕೇಳುತ್ತಾನೆ. ಇಲ್ಲಿ ಮಾಂಸ, ಈರುಳ್ಳಿ ಅಥವಾ ಬೆಳ್ಳುಳ್ಳಿ ಸಿಗುವುದಿಲ್ಲ ಎಂದು ಸಿಬ್ಬಂದಿ ಹೇಳಿದಾಗ, ತಕ್ಷಣ ಆತ ಕೆಎಫ್‌ಸಿ ಚಿಕನ್ ಬಕೆಟ್ ತೆಗೆದು ರೆಸ್ಟೋರೆಂಟ್ ಒಳಗೆ ತಿನ್ನಲು ಪ್ರಾರಂಭಿಸುತ್ತಾನೆ. ಬಳಿಕ ಸಿಬ್ಬಂದಿ ಹಾಗೂ ಗ್ರಾಹಕರಿಗೂ ಚಿಕನ್​ ಕೊಡಲು ಯತ್ನಿಸುತ್ತಾನೆ. ಆದರೆ, ಯಾರೋಬ್ಬರು ಅದನ್ನು ಸ್ವೀಕರಿಸುವುದಿಲ್ಲ.

ಇದೇ ಸಮಯದಲ್ಲಿ ಒಬ್ಬ ಗ್ರಾಹಕ ಆತನ ಮುಂದೆ ಬಂದು "ಕ್ಷಮಿಸಿ, ನೀವು ಮಾಡುತ್ತಿರುವುದು ಈ ಸ್ಥಳದ ನಿಯಮಗಳನ್ನು ಉಲ್ಲಂಘಿಸುತ್ತಿದೆ ಮತ್ತು ಇದು ನ್ಯಾಯಯುತವಲ್ಲ" ಎಂದು ಹೇಳುತ್ತಾನೆ. ಆದಾಗ್ಯೂ, ಭದ್ರತಾ ಸಿಬ್ಬಂದಿಯನ್ನು ಕರೆಯುವವರೆಗೂ ಆ ವ್ಯಕ್ತಿ ತನ್ನ ಮೊಂಡು ವರ್ತನೆಯನ್ನು ಮುಂದುವರಿಸುತ್ತಾನೆ ಮತ್ತು ಅಂತಿಮವಾಗಿ ಆತನನ್ನು ಅಲ್ಲಿಂದ ಹೊರಗೆ ಕಳುಹಿಸಲಾಗುತ್ತದೆ.

ಈ ಒಂದು ಘಟನೆಯು ಜನಾಕ್ರೋಶಕ್ಕೆ ಕಾರಣವಾಗಿದ್ದು, ಈ ಒಂದು ಕೃತ್ಯವು ಜನಾಂಗೀಯ ಪ್ರೇರಿತವಾಗಿದೆಯೇ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಗುರಿಯನ್ನು ಹೊಂದಿದೆಯೇ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದಾರೆ. ಆದರೆ, ವಿಡಿಯೋದ ಸತ್ಯಾಸತ್ಯತೆ, ಸ್ಥಳ ಅಥವಾ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಸ್ತುತ ಜಾಲತಾಣದಲ್ಲಿ ವೈರಲ್​ ಆಗಿದೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಭಾವಿಸುತ್ತೇನೆ. ಅವನನ್ನು ಬಂಧಿಸಬಹುದೇ ಅಥವಾ ಇಲ್ಲವೇ? ಇದು ಹಿಂದೂಗಳ ಮೇಲಿನ ದ್ವೇಷ. ಹಿಂದೂಗಳು ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಅವನಿಗೆ ತಿಳಿದಿದೆ. ಅದಕ್ಕಾಗಿಯೇ ಆತ ಹಾಗೆ ಮಾಡಲು ಧೈರ್ಯ ಮಾಡಿದ್ದಾನೆ ಎಂದು ನೆಟ್ಟಿಗರೊಬ್ಬರು ವಿಡಿಯೋ ಕುರಿತು ಕಾಮೆಂಟ್​ ಮಾಡಿದ್ದಾರೆ.

ಯಾವುದೇ ರೆಸ್ಟೋರೆಂಟ್‌ಗೆ ಹೊರಗಿನ ಆಹಾರವನ್ನು ತರುವುದನ್ನು ನಿಷೇಧಿಸಲಾಗಿದೆ. ಇಸ್ಕಾನ್‌ಗೆ ಮಾಂಸ ತರುವುದು ಕೇವಲ ಅಗೌರವವಲ್ಲ, ಬದಲಾಗಿ ನಾವು ಎತ್ತಿಹಿಡಿಯುವ ತತ್ವಗಳ ಮೇಲಿನ ದಾಳಿಯಾಗಿದೆ. ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಕ್ರಮ ಅಗತ್ಯ ಎಂದು ಮತ್ತೊಬ್ಬ ನೆಟ್ಟಿಗ ಆಗ್ರಹಿಸಿದ್ದಾರೆ.

ಈ ರೀತಿಯಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ರೂಢಿಯ ಉದ್ದೇಶಪೂರ್ವಕ ಉಲ್ಲಂಘನೆಯು ಯಾವುದೇ ನಾಗರಿಕ ಸಮಾಜದಲ್ಲಿ ಸಹಿಸಲಾಗದ ಅಸಹಿಷ್ಣುತೆಯ ಸ್ಪಷ್ಟ ಪ್ರದರ್ಶನವಾಗಿದೆ ಎಂದು ಮಗದೊಬ್ಬ ನೆಟ್ಟಿಗ ಟೀಕಾ ಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net