ಡ್ರೆಸ್ಸಿಂಗ್ ರೂಮ್​ನಲ್ಲಿ ಕೈ ಕೈ ಮಿಲಾಯಿಸಿದ ಇಬ್ಬರು ಪಾಕ್​ ಆಟಗಾರರು! ಮಧ್ಯಸ್ಥಿಕೆ ವಹಿಸಿದವನಿಗೂ ಬಿತ್ತಾ ಗೂಸಾ?

ವಿಜಯವಾಣಿ (70)
Published on

ರಾವಲ್​ಪಿಂಡಿ: ಇತ್ತೀಚೆಗಷ್ಟೇ ಎರಡು ಪಂದ್ಯಗಳ ಮೊದಲ ಟೆಸ್ಟ್​ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್​ಗಳ ಅಂತರದಿಂದ ಹೀನಾಯವಾಗಿ ಸೋತ ಪಾಕಿಸ್ತಾನ, ತಮ್ಮನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ, ಈ ಹಿಂದೆ ನಡೆದ 13 ಮ್ಯಾಚ್​ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬೆವರಿಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸಿತು. ಈ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ಯಾಪ್ಟನ್ ಶಾನ್ ಮಸೂದ್​ ಟೆಸ್ಟ್​ ಪಂದ್ಯದ ಬಳಿಕ ಡ್ರೆಸ್ಸಿಂಗ್​​ ರೂಮ್​ನಲ್ಲಿ ತಮ್ಮ ಸಹ ಆಟಗಾರನೊಂದಿಗೆ ಕೈ ಕೈ ಮಿಲಾಯಿಸಿದ್ದಾರೆ ಎಂಬ ಸುದ್ದಿಯೊಂದು ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ.

ಜಟಾಪಟಿ ನಡೆದಿರುವುದು ನಿಜ ಎಂದೇಳುವ ಕೆಲವು ವರದಿಗಳ ಪ್ರಕಾರ, ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ತಂಡ ಹೀನಾಯವಾಗಿ ಸೋತ ಕಾರಣ ಶಾಹೀನ್ ಮತ್ತು ಶಾನ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ತಾರಕಕ್ಕೇರಿದ ಬೆನ್ನಲ್ಲೇ ಇಬ್ಬರು ಕೈ ಕೈ ಮೀಲಾಯಿಸಿದ್ದಾರೆ. ಇವರಿಬ್ಬರ ಜಗಳವನ್ನು ಬಿಡಿಸುವ ಸಲುವಾಗಿ ಮಧ್ಯಸ್ಥಿಕೆ ವಹಿಸಲು ಬಂದ ಸ್ಟಾರ್​ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್​ಗೂ ಹೊಡೆತ ಬಿದ್ದಿದೆ ಎನ್ನಲಾಗಿದೆ. ಈ ಜಟಾಪಟಿ ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್​ಗೆ ಬಂದ ನಂತರ ಭುಗಿಲೆದ್ದಿದೆ ಎಂದು ಉಲ್ಲೇಖಿಸಲಾಗಿದೆ. ಈ ಸುದ್ದಿ ಸದ್ಯ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ನಿಜವೇ? ಎಂಬ ಪ್ರಶ್ನೆ ಸದ್ಯ ವ್ಯಾಪಕವಾಗಿ ಕೇಳಿಬಂದಿದೆ.

ವಿಡಿಯೋವೊಂದರಲ್ಲಿ ಟೆಸ್ಟ್​ ಪಂದ್ಯದ ವೇಳೆ ಕ್ಯಾಪ್ಟನ್ ಶಾನ್ ತನ್ನ ಹೆಗಲ ಮೇಲಿಟ್ಟ ಕೈಯನ್ನು ಶಾಹೀನ್​ ಬಲವಂತವಾಗಿ ಕೆಳಗಿಳಿಸುತ್ತಾರೆ. ಈ ವೈರಲ್ ವೀಡಿಯೋ ನೋಡಿದ ಹಲವರು ಇದು ಬಹುಶಃ ನಿಜವೇ ಇರಬಹುದು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇನ್ನು ಒಂದಷ್ಟು ವರದಿಗಳ ಪ್ರಕಾರ, ಮೈದಾನದಲ್ಲಿ ಆದ ಮನಸ್ತಾಪವೇ ಜಗಳಕ್ಕೆ ತಿರುಗಿದ್ದು, ಈ ಇಬ್ಬರು ಸ್ಟಾರ್ ಕ್ರಿಕೆಟಿಗರ ಪರಸ್ಪರ ದೈಹಿಕ ಕಿತ್ತಾಟಕ್ಕೆ ಕಾರಣವಿರಬಹುದು ಎಂದು ತಿಳಿಸಿದೆ.

ಇವರಿಬ್ಬರ ಜಟಾಪಟಿ ತೆಡೆಯಲು ಮಧ್ಯೆ ಬಂದ ಮೊಹಮ್ಮದ್ ರಿಜ್ವಾನ್​ಗೆ ಥಳಿಸಿದ್ದಾರೆ. ಇನ್ನು ಕ್ರಿಕೆಟಿಗರ ಕಿತ್ತಾಟದಿಂದ ಬೇಸರ ವ್ಯಕ್ತಪಡಿಸಿರುವ ಕೋಚ್ ಗ್ಯಾರಿ ಕರ್ಸ್ಟನ್, ತಂಡದಲ್ಲಿ ಏಕತೆಯ ಕೊರತೆಯ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಇದರಲ್ಲಿ ಎಷ್ಟು ನಿಜ? ಎಷ್ಟು ಸುಳ್ಳು? ಎಂಬುದು ಇನ್ನಷ್ಟು ಸ್ಪಷ್ಟವಾಗಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net