

ರಾಜ್ಕೋಟ್: ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ನಲ್ಲಿ ವಿಜೇತರ ನಿರ್ಣಯ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ನಿಶ್ಚಯವಾಗುವುದು ಖಚಿತವಾಗಿರುವ ಕಾರಣ, ಸೌರಾಷ್ಟ್ರ ಹಾಗೂ ಬಂಗಾಳ ತಂಡಗಳು ಮುನ್ನಡೆ ಪಡೆಯಲು ದೊಡ್ಡ ಮಟ್ಟದ ಜಿದ್ದಾಜಿದ್ದಿನ ಹೋರಾಟ ನಡೆಸಿವೆ. ಯಾವ ತಂಡ ಇನಿಂಗ್ಸ್ ಮುನ್ನಡೆ ಪಡೆಯಲಿದೆಯೋ ಆ ತಂಡಕ್ಕೆ ಟ್ರೋಫಿ ಒಲಿಯಲಿದೆ. ಬಂಗಾಳ ತಂಡಕ್ಕೆ ಟ್ರೋಫಿ ಜಯಿಸಲು ಇನ್ನೂ 72 ರನ್ ಬಾರಿಸಬೇಕಿದ್ದರೆ, ಸೌರಾಷ್ಟ್ರ ತಂಡ 4 ವಿಕೆಟ್ಗಳನ್ನು ಉರುಳಿಸಬೇಕಿದೆ.
ಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುರುವಾರ, 3 ವಿಕೆಟ್ಗೆ 134 ರನ್ಗಳಿಂದ 4ನೇ ದಿನದಾಟ ಮುಂದುವರಿಸಿದ ಬಂಗಾಳ ತಂಡ, ಇಡೀ ದಿನ ಬ್ಯಾಟಿಂಗ್ ಮಾಡಿ 3 ವಿಕೆಟ್ಗಳಿಂದ 220 ರನ್ ಪೇರಿಸಿತು. 147 ಓವರ್ಗಳಲ್ಲಿ 6 ವಿಕೆಟ್ಗೆ 354 ರನ್ ಪೇರಿಸಿದ್ದು, ಇನ್ನೂ 72 ರನ್ ಹಿನ್ನಡೆಯಲ್ಲಿದೆ. ಕ್ವಾರ್ಟರ್ಫೈನಲ್ ಹಾಗೂ ಸೆಮಿಫೈನಲ್ನಲ್ಲಿ ಶತಕ ಸಿಡಿಸಿ ತಂಡದ ಪಾಲಿಗೆ ಆಪದ್ಭಾಂದವರಾಗಿದ್ದ ಅನುಷ್ಟಪ್ ಮಜುಮ್ದಾರ್ (58* ರನ್, 124 ಎಸೆತ, 8 ಬೌಂಡರಿ) ಹಾಗೂ ಅರ್ನಾಬ್ ನಂದಿ (28*) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಿನದಾಟದ ಮೊದಲ ಅವಧಿಯಲ್ಲಿ ಸೌರಾಷ್ಟ್ರ ತಂಡ ವಿಕೆಟ್ ಪಡೆಯುವಲ್ಲಿ ವಿಫಲವಾಯಿತು. ಆದರೆ, ಭೋಜನ ವಿರಾಮದ ಬಳಿಕ ಮೂರು ಪ್ರಮುಖ ವಿಕೆಟ್ ಉರುಳಿಸುವ ಮೂಲಕ ಸೌರಾಷ್ಟ್ರ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. 6 ವಿಕೆಟ್ಗೆ 263 ರನ್ ಬಾರಿಸಿದ್ದ ಬಂಗಾಳ ತಂಡ ಟ್ರೋಫಿ ಆಸೆಯನ್ನು ಕೈಬಿಟ್ಟಿತು ಎನ್ನುವ ಹಂತದಲ್ಲಿಯೇ ಅನುಷ್ಟಪ್ ಮಜುಮ್ದಾರ್ ಹಾಗೂ ಅರ್ನಾಬ್ ನಂದಿ 7ನೇ ವಿಕೆಟ್ಗೆ 158 ಎಸೆತಗಳಲ್ಲಿ 91 ರನ್ ಜತೆಯಾಟವಾಡುವ ಮೂಲಕ ಆಸರೆಯಾಗಿದ್ದಾರೆ. ಶುಕ್ರವಾರದ ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳು ತೋರುವ ನಿರ್ವಹಣೆಯ ಆಧಾರದ ಮೇಲೆ ಟ್ರೋಫಿ ಯಾರ ಮುಡಿಗೇರಲಿದೆ ಎನ್ನುವುದು ನಿರ್ಧಾರವಾಗಲಿದೆ.
ಮೂವರಿಂದ ಅರ್ಧಶತಕದ ಪ್ರತಿರೋಧ: 47 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಸುದೀಪ್ ಚಟರ್ಜಿ (81 ರನ್, 241 ಎಸೆತ, 7 ಬೌಂಡರಿ) ಹಾಗೂ 4 ರನ್ನಿಂದ ಆಟ ಮುಂದುವರಿಸಿದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೃದ್ಧಿಮಾನ್ ಸಾಹ (64ರನ್, 184 ಎಸೆತ, 10 ಬೌಂಡರಿ, 1 ಸಿಕ್ಸರ್) 4ನೇ ವಿಕೆಟ್ಗೆ 101 ರನ್ ಸೇರಿಸಿ ಮುನ್ನಡೆಯ ಭರವಸೆ ನೀಡಿದ್ದರು. ಆದರೆ, 16 ರನ್ಗಳ ಅಂತರದಲ್ಲಿ ಇವರಿಬ್ಬರು ಪೆವಿಲಿಯನ್ ಸೇರಿಕೊಂಡಾಗ ಬಂಗಾಳ ತಂಡ ಮತ್ತೆ ಆಘಾತ ಎದುರಿಸಿತ್ತು.