ರಣಜಿ ಟ್ರೋಫಿಯಲ್ಲಿ ಬಂಗಾಳ ವಿರುದ್ಧ ಡ್ರಾಕ್ಕೆ ತೃಪ್ತಿ; ಕರ್ನಾಟಕ ಮತ್ತೆ 1 ಅಂಕದ ಸಮಾಧಾನ

web ranji
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಅಂತಿಮ ದಿನವೂ ನೀರಸ ಬೌಲಿಂಗ್​ ದಾಳಿ ನಡೆಸಿದ ಬಳಿಕ ಎರಡನೇ ಇನಿಂಗ್ಸ್​ನಲ್ಲಿ ತುಸು ಸುಧಾರಿತ ಬ್ಯಾಟಿಂಗ್​ ನಿರ್ವಹಣೆ ತೋರಿದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ತನ್ನ 4ನೇ ಲೀಗ್​ ಪಂದ್ಯದಲ್ಲಿ ಪ್ರವಾಸಿ ಬಂಗಾಳ ವಿರುದ್ಧ ಡ್ರಾ ಸಮಾಧಾನ ಕಂಡಿದೆ. ಮೊದಲ ಇನಿಂಗ್ಸ್​ ಮುನ್ನಡೆ ಸಾಧಿಸಿದ ಬಂಗಾಳ ಮೂರು ಅಂಕ ಸಂಪಾದಿಸಿದರೆ, ಮಯಾಂಕ್​ ಅಗರ್ವಾಲ್​ ಬಳಗ ಮತ್ತೆ ಒಂದು ಅಂಕಕ್ಕೆ ತೃಪ್ತಿಪಟ್ಟಿತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 3 ವಿಕೆಟ್​ಗೆ 127 ರನ್​ಗಳಿಂದ ನಾಲ್ಕನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಬಂಗಾಳ, ಸುದೀಪ್​ ಕುಮಾರ್​ ರಮಿ (101*ರನ್​, 193 ಎಸೆತ, 12 ಬೌಂಡರಿ, 2 ಸಿಕ್ಸರ್​) ಶತಕ ಮತ್ತು ವೃತ್ತೀಜಿವನದ ಕೊನೇ ರಣಜಿ ಆಡುತ್ತಿರುವ ವಿಕೆಟ್​ ಕೀಪರ್​&ಬ್ಯಾಟರ್​ ವೃದ್ಧಿಮಾನ್​ ಸಾಹ (63*ರನ್​, 70 ಎಸೆತ, 7 ಬೌಂಡರಿ, 1 ಸಿಕ್ಸರ್​) ಅರ್ಧಶತಕದಾಟದಿಂದ 5 ವಿಕೆಟ್​ಗೆ 283 ರನ್​ ಪೇರಿಸಿ 2ನೇ ಇನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿತು. ಇದರಿಂದ ಗೆಲುವಿಗೆ 364 ರನ್​ ಗುರಿ ಪಡೆದ ಕರ್ನಾಟಕ ತಂಡ 28 ಓವರ್​ಗಳಲ್ಲಿ 3 ವಿಕೆಟ್​ಗೆ 110 ರನ್​ ಗಳಿಸಿದಾಗ ಉಭಯ ತಂಡಗಳ ನಾಯಕರು ಡ್ರಾಕ್ಕೆ ಸಮ್ಮತಿಸಿದರು.

ಆಗ ಆರ್​. ಸ್ಮರಣ್​ (35*) ಮತ್ತು ಮನೀಷ್​ ಪಾಂಡೆ (30*) ಮುರಿಯದ 4ನೇ ವಿಕೆಟ್​ಗೆ 42 ರನ್​ ಸೇರಿಸಿ ಕ್ರೀಸ್​ನಲ್ಲಿದ್ದರು. ಇದಕ್ಕೆ ಮುನ್ನ ಆರಂಭಿಕರಾದ ನಾಯಕ ಮಯಾಂಕ್​ ಅಗರ್ವಾಲ್​ (5) ಮತ್ತು ಕಿಶನ್​ ಬಿದರೆ (5) ಬೇಗನೆ ಔಟಾದಾಗ ಕರ್ನಾಟಕಕ್ಕೆ ಸೋಲಿನ ಭೀತಿ ಹುಟ್ಟಿತ್ತು. ಆಗ ಸ್ಮರಣ್​, ಶ್ರೇಯಸ್​ ಗೋಪಾಲ್​ (32) ಜತೆ 3ನೇ ವಿಕೆಟ್​ಗೆ 56 ರನ್​ ಜತೆಯಾಟವಾಡಿ ಚೇತರಿಕೆ ಒದಗಿಸಿದರು ಮತ್ತು ಡ್ರಾ ಆಸೆಗೆ ಬಲ ತುಂಬಿದರು.

ಕಾಡಿದ ಸುದೀಪ್​-ಸಾಹ

ಕರ್ನಾಟಕ ತಂಡ ಬೆಳಗ್ಗೆ ಬಂಗಾಳ ತಂಡದ 2 ವಿಕೆಟ್​ಗಳನ್ನು ಬೇಗನೆ ಕಬಳಿಸಿದಾಗ ಗೆಲುವಿಗೆ ಪ್ರಯತ್ನಿಸುವ ನಿರೀೆ ಮೂಡಿತು. ಶಾಬಾಜ್​ ಅಹ್ಮದ್​ (18) ಮತ್ತು ಅವಿಲಿನ್​ ಘೋಷ್​ಗೆ (5) ವಿದ್ಯಾಧರ್​ ಪಾಟೀಲ್​ (53ಕ್ಕೆ 3) ಪೆವಿಲಿಯನ್​ ದಾರಿ ತೋರಿಸಿದರು. ಆದರೆ ಆಗ ಜತೆಗೂಡಿದ ಸುದೀಪ್​ ರಮಿ ಮತ್ತು ವೃದ್ಧಿಮಾನ್​ ಸಾಹ ಮುರಿಯದ 6ನೇ ವಿಕೆಟ್​ಗೆ 123 ರನ್​ ಸೇರಿಸಿ ರಾಜ್ಯ ತಂಡದ ಆಸೆಗೆ ತಣ್ಣೀರು ಎರಚಿದರು. ಸುದೀಪ್​ ರಮಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 5ನೇ ಶತಕ ಪೂರೈಸಿದ ಬಳಿಕವೇ ಬಂಗಾಳ ಡಿಕ್ಲೇರ್​ ಘೋಷಿಸಿತು.

ಬಂಗಾಳ: 301 ಮತ್ತು 81.4 ಓವರ್​ಗಳಲ್ಲಿ 5 ವಿಕೆಟ್​ಗೆ 283 ಡಿಕ್ಲೇರ್​ (ಸುದೀಪ್​ ರಮಿ 101*, ಶಾಬಾಜ್​ 18, ಅವ್ಲಿನ್​ 5, ವೃದ್ಧಿಮಾನ್​ ಸಾಹ 63*, ವಿದ್ಯಾಧರ್​ 53ಕ್ಕೆ 3), ಕರ್ನಾಟಕ: 221 ಮತ್ತು 28 ಓವರ್​ಗಳಲ್ಲಿ 3 ವಿಕೆಟ್​ಗೆ 110 (ಮಯಾಂಕ್​ 5, ಕಿಶನ್​ ಬಿದರೆ 5, ಆರ್​. ಸ್ಮರ್​ಣ್​ 35*, ಶ್ರೇಯಸ್​ 32, ಮನೀಷ್​ ಪಾಂಡೆ 30*, ಸೂರಜ್​ ಜೈಸ್ವಾಲ್​ 27ಕ್ಕೆ 3). ಪಂದ್ಯಶ್ರೇಷ್ಠ: ಅನುಷ್ಟುಪ್​ ಮಜುಮ್ದಾರ್​.

ಕರ್ನಾಟಕಕ್ಕೆ ಮುಂದಿನ ಪಂದ್ಯ

ಎದುರಾಳಿ: ಉತ್ತರ ಪ್ರದೇಶ

ಯಾವಾಗ: ನವೆಂಬರ್​ 13-16

ಎಲ್ಲಿ: ಲಖನೌ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net