

BCCI: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಇದೀಗ ಭಾರತ ತಂಡ ಅಧಿಕೃತವಾಗಿ ಪ್ರಕಟವಾಗಿದೆ. ಕ್ಯಾಪ್ಟನ್ ಆಗಿ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಿದರೆ, ಉಪನಾಯಕನಾಗಿ ರವೀಂದ್ರ ಜಡೇಜಾ ಕಣಕ್ಕಿಳಿಯಲಿದ್ದಾರೆ. ಈ ಮಧ್ಯೆ ಮತ್ತೊಮ್ಮೆ ಟೆಸ್ಟ್ ತಂಡದಿಂದ ಸರ್ಫರಾಜ್ ಖಾನ್ರನ್ನು ಕೈಬಿಟ್ಟ ಬಗ್ಗೆ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಕಳೆದ ಜೂನ್, ಆಗಸ್ಟ್ನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಅಭಿಮನ್ಯು ಈಶ್ವರನ್, ಶಾರ್ದೂಲ್ ಠಾಕೂರ್ ಮತ್ತು ಕರುಣ್ ನಾಯರ್ ಸೇರಿ ಒಂದಷ್ಟು ಆಟಗಾರರನ್ನು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಬಿಸಿಸಿಐ ಪರಿಗಣಿಸಿಲ್ಲ. ಆದರೆ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನವೇ ಬರೋಬ್ಬರಿ 10 ಕೆಜಿ ತೂಕವನ್ನು ಇಳಿಸಿಕೊಂಡು, ದೇಶಿಯ ಕ್ರಿಕೆಟ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸರ್ಫರಾಜ್ ಖಾನ್ರನ್ನು ಮತ್ತೊಮ್ಮೆ ಆಯ್ಕೆಯಿಂದ ಹೊರಗಿಟ್ಟ ಬಿಸಿಸಿಐ ನಿರ್ಧಾರದ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ.
ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗದ ಹಿನ್ನೆಲೆ ಸರ್ಫರಾಜ್, ಭಾರತ ಎ ತಂಡದ ಪರ ಹಲವು ಪಂದ್ಯಗಳನ್ನಾಡಿದರು. ಈ ವೇಳೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು, ದೇಶಿಯ ಟೆಸ್ಟ್ ಕ್ರಿಕೆಟ್ನಲ್ಲಿ ಶತಕದಾಟ ಪ್ರದರ್ಶಿಸಿದ್ದು ಬಿಸಿಸಿಐ ಆಯ್ಕೆಗಾರರನ್ನು ಪ್ರಶ್ನಿಸುವಂತೆ ಮಾಡಿತು. ಇಂಗ್ಲೆಂಡ್ ಸರಣಿ ಬಳಿಕ ಇದೀಗ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಿಂದಲೂ ಅವರನ್ನು ತಂಡದಿಂದ ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಕಡೆಗೂ ಬಿಸಿಸಿಐ ಉತ್ತರಿಸಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಸರ್ಫರಾಜ್ ಖಾನ್ರನ್ನು ಕೈಬಿಡಲು ಕಾರಣವೇನು? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅರ್ಗಕರ್, "ಖಾನ್ ಇಂಜುರಿಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ,(ಏಜೆನ್ಸೀಸ್).