ನೈಟ್ ಪಾರ್ಟಿ, ಗರ್ಲ್​ಫ್ರೆಂಡ್ಸ್​, 9 ಗಂಟೆಗೆ ನಿದ್ರೆ... ಬೌಲರ್​ಗಳ ದುಸ್ವಪ್ನ ಅಭಿಷೇಕ್ ಶರ್ಮ ಯಶಸ್ಸಿನ ರಹಸ್ಯ ಬಯಲು... Abhishek Sharma

Abhishek Sharma
Published on

Abhishek Sharma : ಟೀಮ್​ ಇಂಡಿಯಾದ ಮುಂದಿನ ಸೂಪರ್‌ಸ್ಟಾರ್ ಯಾರು ಎಂಬ ಪ್ರಶ್ನೆಗೆ ತಮ್ಮ ಅಬ್ಬರದ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಯುವ ಕ್ರಿಕೆಟಿಗ ಅಭಿಷೇಕ್ ಶರ್ಮ ಉತ್ತರ ನೀಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಸ್ಥಿರತೆ ಕಾಯ್ದುಕೊಂಡು ಬರುತ್ತಿರುವ ಅಭಿಷೇಕ್​ ಟೀಮ್​ ಇಂಡಿಯಾ ಪಾಲಿಗೆ ಲಕ್ಕಿ ಚಾರ್ಮ್​ ಆಗಿದ್ದಾರೆ.

ಪಂಜಾಬ್ ಮೂಲದ 25 ವರ್ಷದ ಈ ಆಟಗಾರ ಎದುರಾಳಿಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. ಬೌಲರ್​ಗಳಿಗಂತೂ ಚಿಂತೆಗೆ ದೂಡಿದ್ದಾರೆ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ನಲ್ಲಿ ಅವರ ಪ್ರದರ್ಶನವನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ.

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಅಭಿಷೇಕ್ ಶರ್ಮ ಬಗ್ಗೆ ಹೇಳಿರುವ ಕೆಲವು ಗೊತ್ತಿಲ್ಲದ ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿವೆ. ಬಿಸಿಸಿಐನ ವಾರ್ಷಿಕ ಒಪ್ಪಂದದಲ್ಲಿ ಅಭಿಷೇಕ್ ಅವರನ್ನು ಸೇರಿಸಿದ ಬಳಿಕ ಯೋಗರಾಜ್ ಸಿಂಗ್ ಅವರು ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಅಭಿಷೇಕ್‌ಗೆ ತಡರಾತ್ರಿ ಪಾರ್ಟಿಗಳು ಮತ್ತು ಗೆಳತಿಯರೊಂದಿಗೆ ಸುತ್ತಾಡುವ ಅಭ್ಯಾಸವಿತ್ತು ಮತ್ತು ಅಭಿಷೇಕ್ ಅವರ ಆಂತರಿಕ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿ ಈ ಅಭ್ಯಾಸಗಳನ್ನು ಕೊನೆಗಾಣಿಸಿದ್ದು ನನ್ನ ಮಗ ಯುವರಾಜ್​ ಸಿಂಗ್​ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.

ಅಭಿಷೇಕ್ ಅವರ ತಂದೆಗೂ ಮಗನ ಜೀವನಶೈಲಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಯುವರಾಜ್ ಸಿಂಗ್​ ಅವರು ಮಧ್ಯಪ್ರವೇಶಿಸಿದ ಬಳಿಕ ಅಭಿಷೇಕ್ ಅವರ ಜೀವನದಲ್ಲಿ ಮಹತ್ವದ ಬದಲಾವಣೆ ಆಯಿತು. ಆತನ ಕ್ರಿಕೆಟ್​​ನಲ್ಲಿ ಬಹಳಷ್ಟು ಸುಧಾರಣೆ ಕಂಡಿತು. ಆತನ ಬದಲಾವಣೆಯ ಹಾದಿಯನ್ನು ನಾನು ಗಮನಿಸಿದ್ದೇನೆ ಎಂದು ಯೋಗರಾಜ್​ ಸಿಂಗ್​ ಅವರು ತಿಳಿಸಿದ್ದಾರೆ. ಪ್ರತಿದಿನ ರಾತ್ರಿ ಒಂಬತ್ತು ಗಂಟೆಗೆ ಮಲಗಿಬಿಡಿ ಎಂದು ಅಭಿಷೇಕ್​ಗೆ ಯುವರಾಜ್ ಹೇಳುವುದನ್ನು ನಾನು ಕೇಳಿದ್ದೇನೆ ಎಂದು ಯೋಗರಾಜ್​ ಸಿಂಗ್​ ಹೇಳಿದರು.

ನಾನು ಒಮ್ಮೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ನ ತರಬೇತುದಾರರನ್ನು ಅಭಿಷೇಕ್ ಅವರ ಪ್ರದರ್ಶನದ ಬಗ್ಗೆ ಕೇಳಿದೆ. ಅವರು ಆತನನ್ನು ಬೌಲರ್ ಎಂದು ಹೇಳಿದರು. ನಾನು ಆತನ ಪ್ರದರ್ಶನವನ್ನು ಪರಿಶೀಲಿಸಿದಾಗ ಆತ 24 ಶತಕಗಳನ್ನು ಗಳಿಸಿದ್ದಾರೆ ಎಂಬುದು ನನಗೆ ತಿಳಿಯಿತು. ಯುವರಾಜ್ ಅವರನ್ನು ನೀವು ಏಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ನಾನು ಹೇಳುತ್ತಿರುವ ಆರೇಳು ವರ್ಷಗಳ ಹಿಂದಿನ ಮಾತು ಎಂದು ಯೋಗರಾಜ್ ಸಿಂಗ್ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net