

Jaker Ali : ಸತತ ಗೆಲುವುಗಳೊಂದಿಗೆ ಟೀಮ್ ಇಂಡಿಯಾ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಬುಧವಾರ (ಸೆ.24) ಬಾಂಗ್ಲಾದೇಶ ವಿರುದ್ಧ 41 ರನ್ಗಳ ಜಯ ಸಾಧಿಸುವ ಮೂಲಕ ಅಂತಿಮ ಸುತ್ತಿನ ಸ್ಪರ್ಧೆಗೆ ಲಗ್ಗೆ ಇಟ್ಟಿದೆ. ಏಷ್ಯಾ ಕಪ್ ಎತ್ತಿ ಹಿಡಿಯಲು ಭಾರತಕ್ಕೆ ಇನ್ನೊಂದು ಹೆಜ್ಜೆ ಬಾಕಿ ಇದೆ. ಈ ಮಧ್ಯೆ, ಬ್ಯಾಟಿಂಗ್ ಕ್ರಮಾಂಕದಲ್ಲಿನ ವೈಫಲ್ಯದಿಂದಾಗಿ ಪಂದ್ಯ ಸೋತಿದ್ದೇವೆ ಎಂದು ಬಾಂಗ್ಲಾದೇಶ ನಾಯಕ ಜಾಕಿರ್ ಅಲಿ ಹೇಳಿದ್ದಾರೆ. ಅಲ್ಲದೆ, ಇಂದು (ಸೆ.25) ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆದ್ದು ಫೈನಲ್ ತಲುಪುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಸೋಲುಂಡ ಬಳಿಕ ಪಂದ್ಯದ ಪ್ರಸ್ತುತಿಯಲ್ಲಿ ಮಾತನಾಡಿದ ಜಾಕಿರ್ ಅಲಿ, ತಮ್ಮ ಬೌಲರ್ಗಳು ಅಸಾಧಾರಣ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು. ನಮ್ಮ ಬೌಲರ್ಗಳು ಟೀಮ್ ಇಂಡಿಯಾವನ್ನು ಕಡಿಮೆ ಸ್ಕೋರ್ಗೆ ಸೀಮಿತಗೊಳಿಸಿದರು. ಎಲ್ಲ ಶ್ರೇಯಸ್ಸು ನಮ್ಮ ಹುಡುಗರಿಗೆ ಸಲ್ಲುತ್ತದೆ. ಮೊದಲ 10 ಓವರ್ಗಳ ನಂತರ, ತಮ್ಮ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯದಿಂದ ನಾವು ಬಹಳಷ್ಟು ಕಲಿತಿದ್ದೇವೆ ಎಂದು ಜಾಕಿರ್ ಅಲಿ ಹೇಳಿದರು.
ಗುರುವಾರ (ಸೆ.25) ಪಾಕಿಸ್ತಾನ ವಿರುದ್ಧ ಪಂದ್ಯವಿದ್ದು, ಈ ಪಂದ್ಯವನ್ನು ಗೆದ್ದರೆ ನಾವು ಫೈನಲ್ ತಲುಪುತ್ತೇವೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಯಾವ ಸಂಯೋಜನೆ ಉತ್ತಮವಾಗಿರುತ್ತದೆ ಎಂಬುದರ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ. ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲಿಗೆ ನಮ್ಮ ಬ್ಯಾಟರ್ಗಳ ವೈಫಲ್ಯವೇ ಕಾರಣ ಎಂದು ಜಾಕಿರ್ ಅಲಿ ಹೇಳಿದರು.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 168 ರನ್ ಗಳಿಸಿತು. ಅಭಿಷೇಕ್ ಶರ್ಮ (75 ರನ್, 37 ಎಸೆತ, 6 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಮಾಡಿದರು. ಹಾರ್ದಿಕ್ ಪಾಂಡ್ಯ (38 ರನ್, 29 ಎಸೆತ) ಮತ್ತು ಶುಭಮಾನ್ ಗಿಲ್ (29 ರನ್, 19 ಎಸೆತ) ಉತ್ತಮ ಪ್ರದರ್ಶನವನ್ನು ನೀಡಿದರು. ಬಾಂಗ್ಲಾದೇಶದ ಬೌಲರ್ಗಳಲ್ಲಿ ರಿಷಾದ್ ಹೊಸೈನ್ ಎರಡು ವಿಕೆಟ್ ಪಡೆದರೆ, ತಂಜಿಮ್ ಹಸನ್, ಮುಸ್ತಾಫಿಜುರ್ ಮತ್ತು ಸೈಫುದ್ದೀನ್ ತಲಾ ಒಂದು ವಿಕೆಟ್ ಪಡೆದರು.
ಸೈಫ್ ಹಸನ್ (69 ರನ್ 3 ಬೌಂಡರಿ, 5 ಸಿಕ್ಸರ್) ಅರ್ಧಶತಕದ ಹೊರತಾಗಿಯೂ, 169 ರನ್ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 19.3 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು. ಭಾರತೀಯ ಬೌಲರ್ಗಳಲ್ಲಿ ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ತಿಲಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)