ಬಾಂಗ್ಲಾ ವಿರುದ್ಧ ಬಿರುಗಾಳಿ ಬ್ಯಾಟಿಂಗ್​... 17 ವರ್ಷದಿಂದ ಯಾರೂ ಮುರಿಯದ ದಾಖಲೆ ಮುರಿದ ಅಭಿಷೇಕ್ ಶರ್ಮ! Abhishek Sharma

Abhishek Sharma
Published on

Abhishek Sharma : ಏಷ್ಯಾ ಕಪ್ ಟೂರ್ನಿಯ ಸೂಪರ್-4 ರ ಭಾಗವಾಗಿ ಬುಧವಾರ (ಸೆ.24) ರಾತ್ರಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮಹತ್ವದ ಪಂದ್ಯ ನಡೆಯಿತು. ಇದರಲ್ಲಿ ಸೂರ್ಯಕುಮಾರ್​ ಯಾದವ್​ ನೇತೃತ್ವದ ಟೀಮ್​ ಇಂಡಿಯಾ 41 ರನ್‌ಗಳಿಂದ ಭರ್ಜರಿ ಜಯಗಳಿಸಿತು. ಅಲ್ಲದೆ, ಈ ಗೆಲುವಿನೊಂದಿಗೆ ಭಾರತ ಫೈನಲ್​ಗೇರಿದೆ.

ಭಾರತ vs ಬಾಂಗ್ಲಾದೇಶ ಪಂದ್ಯದಲ್ಲಿ, ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮ ತಮ್ಮ ಅಬ್ಬರದ ಬ್ಯಾಟಿಂಗ್​ ಮೂಲಕ ಮಿಂಚಿದರು. ಅಭಿಷೇಕ್​ ಅವರು ತಮ್ಮದೇ ಆದ ಶೈಲಿಯಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್​ಗಳ ನೆರವಿನಿಂದ 75 ರನ್ ಗಳಿಸುವ ಮೂಲಕ ಬಾಂಗ್ಲಾ ಬೌಲರ್​ಗಳನ್ನು ಬೆಂಡತ್ತಿದರು.

2025ರ ಏಷ್ಯಾ ಕಪ್ ಪಂದ್ಯಾವಳಿಯ ಆರಂಭದಿಂದಲೂ ವಿನಾಶಕಾರಿ ಬ್ಯಾಟಿಂಗ್ ಮೂಡ್​ನಲ್ಲಿರುವ ಅಭಿಷೇಕ್ ಶರ್ಮ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದರು. ಏಷ್ಯಾ ಕಪ್​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಅಭಿಷೇಕ್ ಶರ್ಮ ಶ್ರೀಲಂಕಾದ ದಿಗ್ಗಜ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿದರು.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 37 ಎಸೆತಗಳಲ್ಲಿ 75 ರನ್ ಗಳಿಸಿದರು. ಆದಾಗ್ಯೂ, ಈ ಟೂರ್ನಿಯಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಿರುವ ಅಭಿಷೇಕ್ 248 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಒಟ್ಟು 24 ಬೌಂಡರಿಗಳು ಮತ್ತು 17 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು 2008ರ ಏಷ್ಯಾ ಕಪ್‌ನಲ್ಲಿ 14 ಸಿಕ್ಸರ್‌ಗಳೊಂದಿಗೆ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದರು. ಆದರೆ, ಇತ್ತೀಚೆಗೆ, ಅಭಿಷೇಕ್ ಆ ದಾಖಲೆಯನ್ನು ಮುರಿದಿದ್ದಾರೆ. ಕಳೆದ 17 ವರ್ಷಗಳಿಂದ ಯಾರೂ ಮುರಿಯದ ದಾಖಲೆಯನ್ನು ಅಭಿಷೇಕ್​ ಮುರಿದಿದ್ದಾರೆ.

ಅಭಿಷೇಕ್ ಶರ್ಮ (17 ಸಿಕ್ಸರ್) ಮತ್ತು ಸನತ್ ಜಯಸೂರ್ಯ (14 ಸಿಕ್ಸರ್) ಅಗ್ರ ಎರಡು ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮ (13), ಶಾಹಿದ್ ಅಫ್ರಿದಿ (12 ಸಿಕ್ಸರ್) ಮತ್ತು ರೆಹಮಾನುಲ್ಲಾ ಗುರ್ಬಾಜ್ (12 ಸಿಕ್ಸರ್) ನಂತರದ ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net