

ರಾಜ್ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯರು ಮೊದಲ ದಿನದಂತ್ಯಕ್ಕೆ ಪ್ರವಾಸಿ ತಂಡದೆದುರು ಉತ್ತಮ ಮೊತ್ತ ಪೇರಿಸಿದ್ದು, ಎರಡನೇ ದಿನದ ಅಂತ್ಯಕ್ಕೆ ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆ ನೀಡಿದೆ.
ಇನ್ನು ಈ ಪಂದ್ಯದ ಮೂಲಕ ಯುವ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸುವ ಮೂಲಕ ಹೊಸ ದಾಖಲೆ ಒಂದನ್ನು ಬರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ಗೆ ಸರ್ಫರಾಜ್ ಖಾನ್ ಪದಾರ್ಪಣೆ ಬೆನ್ನಲ್ಲೇ ಮೈದಾನದಲ್ಲಿ ಅವರ ತಂದೆ ಹಾಗೂ ಪತ್ನಿ ಭಾವುಕರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
48 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಚೊಚ್ಚಲ ಅರ್ಧಶತಕವನ್ನು ಪೂರೈಸಿದ ಸರ್ಫರಾಜ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಪಾತ್ರರಾದರು. ಸರ್ಫರಾಜ್ ಖಾನ್ಗೂ ಮೊದಲು, ಹಾರ್ದಿಕ್ ಪಾಂಡ್ಯ (2017ರಲ್ಲಿ ಶ್ರೀಲಂಕಾ ವಿರುದ್ಧ), ಪಟಿಯಾಲದ ಯುವರಾಜ್ (1934ರಲ್ಲಿ ಇಂಗ್ಲೆಂಡ್ ವಿರುದ್ಧ) ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧತಕ ಬಾರಿಸಿದ ಮೊದಲಿಬ್ಬರು ಬ್ಯಾಟ್ಸ್ಮನ್ಗಳಾಗಿದ್ದಾರೆ.
ಭಾರತದ ಪರ ಟೆಸ್ಟ್ಗೆ ಪಾದಾರ್ಪಣೆ ಮಾಡುವ ಮೊದಲು, ಸರ್ಫರಾಜ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಸರ್ಫರಾಜ್ ಖಾನ್ 45 ಪ್ರಥಮ ದರ್ಜೆ ಪಂದ್ಯಗಳಲ್ಲಿ 69.85 ಸರಾಸರಿಯೊಂದಿಗೆ 3912 ರನ್ ಗಳಿಸಿದ್ದಾರೆ.ಇದರಲ್ಲಿ 14 ಶತಕ, 11 ಅರ್ಧಶತಕ, 1 ಟ್ರಿಪಲ್ ಶತಕ ಬಾರಿಸಿದ ಅದ್ಭುತ ದಾಖಲೆಯನ್ನು ಸರ್ಫರಾಜ್ ಖಾನ್ ಹೆಸರಿನಲ್ಲಿದೆ.