

ನವದೆಹಲಿ: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ ಪಂದ್ಯದಲ್ಲಿ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನದಿಂದ ಭಾರತವನ್ನು ಮಣಿಸಿದ ಕಿವೀಸ್ ಪಡೆ, ಪುಣೆಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಇದೀಗ ಭರ್ಜರಿ ತಯಾರಿ ನಡೆಸುತ್ತಿದೆ. ಮೊದಲ ದಿನದಂದು ಕೇವಲ 46 ರನ್ಗೆ ಆಲ್ಔಟ್ ಆದ ಟೀಮ್ ಇಂಡಿಯಾ, ಎರಡನೇ ಹಾಗೂ ಮೂರನೇ ದಿನದಂದು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯನ್ನು ಉಳಿಸಿಕೊಂಡಿತು. ಈ ವೇಳೆ ಕಿವೀಸ್ ವಿರುದ್ಧದ ಎರಡನೇ ಇನ್ನಿಂಗ್ಸ್ನಲ್ಲಿ ಅಬ್ಬರಿಸಿದ ಸರ್ಫರಾಜ್ ಖಾನ್ (Sarfaraz Khan), 150 ರನ್ ಬಾರಿಸಿ, ನೋಡುಗರ ಪ್ರಶಂಸೆಗೆ ಪಾತ್ರರಾದರು.
ಒಳ್ಳೆಯ ಪ್ರದರ್ಶನ ನೀಡಿದ್ದೇ ಆದರೂ ಸರ್ಫರಾಜ್ ಖಾನ್ಗೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ. ಅವರನ್ನು ಟೀಮ್ ಮ್ಯಾನೇಜ್‌ಮೆಂಟ್ ತಂಡದಿಂದ ಕೈಬಿಡುವುದು ಖಚಿತ ಎಂದು ಭಾರತದ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಭವಿಷ್ಯ ನುಡಿದಿದ್ದಾರೆ. "ಶುಭಮನ್ ಗಿಲ್ ಬದಲಿಗೆ ಟೀಮ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಖಾನ್, ಉತ್ತಮ ಪ್ರದರ್ಶನ ಕೊಟ್ಟಿದ್ದರು ಸಹ ಆತನನ್ನು ಮುಂದಿನ ಪಂದ್ಯದಿಂದ ಕೈಬಿಡಲಾಗುವುದು. ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬರಬೇಕಿರುವ ಕೆ.ಎಲ್. ರಾಹುಲ್ಗೆ ಅವಕಾಶ ಕೊಡಲಿದ್ದಾರೆ" ಎಂದು ತಮ್ಮ ಅಭಿಪ್ರಾಯಿಸಿದ್ದಾರೆ.
"ನನ್ನ ಪ್ರಕಾರ, ಕೆ.ಎಲ್. ರಾಹುಲ್ ಅವರನ್ನು ಮುಂದಿನ ಪಂದ್ಯದಲ್ಲಿ ಆಡಿಸುಲು ಮ್ಯಾನೇಜ್‌ಮೆಂಟ್ ಸಜ್ಜಾಗಿದೆ. ಟೀಮ್ ಮ್ಯಾನೇಜ್‌ಮೆಂಟ್ ಇನ್ನೂ ರಾಹುಲ್ರನ್ನು ಗೌರವಿಸುತ್ತದೆ. ಹೀಗಾಗಿಯೇ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಇಂದಿಗೂ ಬದಲಾಯಿಸಿಲ್ಲ. ವಿರಾಟ್ ಕೊಹ್ಲಿ ಬದಲಿಗೆ ಅವರು ಮೂರನೇ ಕ್ರಮಾಂಕದಲ್ಲಿ ಸುಲಭವಾಗಿ ಬ್ಯಾಟ್ ಮಾಡಬಹುದಿತ್ತು. ಆದರೆ, ಅದು ಸಹ ನಡೆಯಲಿಲ್ಲ. ಮತ್ತೊಂದೆಡೆ ನೋಡಿದರೆ, ಶುಭಮನ್ ಗಿಲ್ ಸ್ಥಾನ ತುಂಬಲು ತಂಡಕ್ಕೆ ಸೇರಿಕೊಂಡ ಸರ್ಫರಾಜ್, ಮೊದಲ ಪಂದ್ಯವನ್ನು ಆಡಿದರು. ಎರಡನೇ ಪಂದ್ಯದಲ್ಲಿ ಗಿಲ್ ಬರುತ್ತಾರೋ, ಇಲ್ಲವೋ ಎಂಬ ಸ್ಪಷ್ಟನೆ ಇಲ್ಲ. ಆದರೂ ಸಹ ಖಾನ್ ತಂಡದಿಂದ ಹೊರಗುಳಿಯುವುದು ಬಹುತೇಕ ಖಚಿತ" ಎಂದಿದ್ದಾರೆ,(ಏಜೆನ್ಸೀಸ್).