

ಶ್ರೀನಗರ: ಮುಂಬೈ ಬ್ಯಾಟರ್ ಸರ್ಫ್ರಾಜ್ ಖಾನ್ ಅವರು ಜಮ್ಮು-ಕಾಶ್ಮೀರದ ಸೋಫಿಯಾನ್ ಜಿಲ್ಲೆಯ ಹುಡುಗಿ ರೋಮಾನಾ ಜಹೂರ್ ಜತೆಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಾಗಿರುವ ಸರ್ಫ್ರಾಜ್, ಕಪ್ಪು ಬಣ್ಣದ ಶೆರ್ವಾನಿ ಧರಿಸಿ ಕಾಶ್ಮೀರದಲ್ಲಿ ವಿವಾಹವಾಗಿದ್ದು, ಇದರ ಚಿತ್ರ-ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸರ್ಫ್ರಾಜ್ ಅವರ ಸಹೋದರಿ ಅವರ ಗೆಳತಿ ಆಗಿರುವ ರೋಮಾನಾ ಜಹೀರ್, ದೆಹಲಿಯಲ್ಲಿ ಎಂಎಸ್ಸಿ ಅಧ್ಯಯನ ಮಾಡಿದ್ದಾರೆ. ಸರ್ಫ್ರಾಜ್ ಸಹೋದರಿ ಕೂಡ ದೆಹಲಿಯಲ್ಲೇ ವಿದ್ಯಾಭ್ಯಾಸ ಮಾಡಿದ್ದು, ಈ ವೇಳೆ ಗೆಳತಿಯಾದ ರೋಮಾನಾರನ್ನು ಸರ್ಫ್ರಾಜ್ ಖಾನ್ ಕೂಡ ಸಹೋದರಿಯ ಮೂಲಕವೇ ಮೊದಲ ಬಾರಿ ಭೇಟಿಯಾಗಿದ್ದರು. ನಂತರ ಇಬ್ಬರೂ ಪ್ರೀತಿಸಲಾರಂಭಿಸಿದ್ದು, ಉಭಯ ಕುಟುಂಬದ ಒಪ್ಪಿಗೆ ಪಡೆದು ಇದೀಗ ವಿವಾಹವಾಗಿದ್ದಾರೆ.
ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಮುಂಬೈ ತಂಡದ ಪರ ರನ್ಪ್ರವಾಹ ಹರಿಸಿದ್ದ 25 ವರ್ಷದ ಸರ್ಫ್ರಾಜ್ ಖಾನ್ಗೆ ಇತ್ತೀಚೆಗೆ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಭಾರತ ತಂಡದಲ್ಲಿ ಸ್ಥಾನ ಲಭಿಸದ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಸರ್ಫ್ರಾಜ್ ಖಾನ್, ಟೀಮ್ ಇಂಡಿಯಾ ಪರ ಆಡಲು ಬೇಕಾದ ಫಿಟ್ನೆಸ್ ಮಟ್ಟವನ್ನು ಹೊಂದಿಲ್ಲ ಮತ್ತು ಅವರ ದುರ್ವರ್ತನೆಯೂ ತಂಡ ಆಯ್ಕೆಗೆ ಹಿನ್ನಡೆಯಾಗಿದೆ ಎಂದು ಆಯ್ಕೆ ಸಮಿತಿಯ ಮೂಲಗಳು ಬಳಿಕ ತಿಳಿಸಿದ್ದವು.
2015ರಲ್ಲಿ ಆರ್ಸಿಬಿ ತಂಡದ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಸರ್ಫ್ರಾಜ್, 2014 ಮತ್ತು 2016ರ 19 ವಯೋಮಿತಿ ವಿಶ್ವಕಪ್ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿಯಲ್ಲಿ ಅವರು ಪಶ್ಚಿಮ ವಲಯ ಪರ ಆಡಿದ್ದರು.