

ನವದೆಹಲಿ: ನಿನ್ನೆ (ಅ.12) ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರವಾಸಿ ಬಾಂಗ್ಲಾದೇಶದ ವಿರುದ್ಧ ನಡೆದ ಟಿ20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ( Team India ) ಭರ್ಜರಿ ಗೆಲುವು ದಾಖಲಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು. ನಿನ್ನೆಯ ಪಂದ್ಯದ ಹೀರೋ ಕೇರಳದ ಸಂಜು ಸ್ಯಾಮ್ಸನ್ ( Sanju Samson ) ಎಂದರೆ ತಪ್ಪಾಗಲಾರದು. ತಮ್ಮ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಬೊಬ್ಬಿರಿದ ಸಂಜು ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ಗಳ ನೆರವಿನಿಂದ 111 ರನ್ ಗಳಿಸಿದರು. ಇದು ಅವರ ಮೊದಲ ಟಿ20 ಶತಕವಾಗಿದೆ. ಅಲ್ಲದೆ, ಭಾರತೀಯ ಆಟಗಾರನ ಎರಡನೇ ಅತಿವೇಗದ ಶತಕವಾಗಿದೆ.
ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಸಂಜು, ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಸಂಜು ಅವರ ಬ್ಯಾಟಿಂಗ್ ಅಬ್ಬರದ ಕಾರಣ ಭಾರತವು 6 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು. ಇದು ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ಸ್ಕೋರ್ ಎನಿಸಿಕೊಂಡಿದೆ. ಈ ಹಿಂದೆ ಸಂಜು ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಟಿ20 ವಿಶ್ವಕಪ್ ಸಂದರ್ಭದಲ್ಲಿ ತಂಡಕ್ಕೆ ಆಯ್ಕೆಯಾದರು ಕೂಡ ಅವರನ್ನು ಕಣಕ್ಕಿಳಿಸಲಿಲ್ಲ. ಇದಾದ ಬಳಿಕ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಬಾರಿ ಗೋಲ್ಡನ್ ಡಕ್ ಆಗಿದ್ದರು. ಹೀಗೆ ಹಲವು ಬಾರಿ ಕೊಟ್ಟ ಅವಕಾಶವನ್ನು ಸಂಜು ಕೈಚೆಲ್ಲಿದ್ದರು. ಹೊಸ ಆಟಗಾರರು ಟೀಮ್ ಇಂಡಿಯಾಗೆ ಎಂಟ್ರಿ ಕೊಡುತ್ತಿರುವ ಈ ಸಂದರ್ಭದಲ್ಲಿ ಸಂಜು ಅವರು ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಕಷ್ಟವೆಂದೇ ಹೇಳಲಾಗಿತ್ತು. ಆದರೆ, ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜುಗೆ ಅವಕಾಶ ಸಿಕ್ಕಿತು. ಮೊದಲ ಎರಡು ಪಂದ್ಯಗಳಲ್ಲಿ ಹೆಚ್ಚು ಪ್ರಭಾವ ಬೀರದ ಸಂಜು, 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿ ಬೊಬ್ಬರಿದರು. ಈ ಮೂಲಕ ತನ್ನ ಬಗ್ಗೆ ಈವರೆಗೆ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದರು. ಸಂಜು ಮತ್ತೆ ಪುಟಿದೇಳಿದ ರೀತಿ ಮಾತ್ರ ಅದ್ಭುತವಾಗಿತ್ತು.
ಪಂದ್ಯದ ಬಳಿಕ ಮಾತನಾಡಿದ ಸಂಜು ತುಂಬಾ ಭಾವುಕರಾದರು. ನಾನು ಇನ್ನಷ್ಟು ಉತ್ತಮವಾಗಿ ಆಡಬೇಕಾಗಿದೆ ಎನ್ನುವ ಮೂಲಕ ಬ್ಯಾಟಿಂಗ್ನಲ್ಲಿ ಮತ್ತಷ್ಟು ಸುಧಾರಿಸಿಕೊಳ್ಳುವ ಬಯಕೆ ವ್ಯಕ್ತಪಡಿಸಿದರು. ನಾನು ಚೆನ್ನಾಗಿ ಆಡಿದ್ದಕ್ಕೆ ತಂಡದ ಸಹ ಆಟಗಾರರು ಖುಷಿಯಾಗಿದ್ದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ. ಹಲವಾರು ಆಟಗಳನ್ನು ಆಡುವ ಮೂಲಕ ಒತ್ತಡ ಮತ್ತು ನನ್ನ ವೈಫಲ್ಯಗಳನ್ನು ಹೇಗೆ ಎದುರಿಸಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ಏಕೆಂದರೆ, ನಾನು ಬಹಳಷ್ಟು ಬಾರಿ ಸೋತಿದ್ದೇನೆ ಎಂದು ಸಂಜು ಭಾವುಕರಾದರು.
ದೇಶಕ್ಕಾಗಿ ಆಡುವಾಗ ತುಂಬಾ ಒತ್ತಡ ಇತ್ತು ಆದರೆ, ನಾನು ಉತ್ತಮ ಪ್ರದರ್ಶನ ನೀಡಲು ಯಾವಾಗಲೂ ಬಯಸುತ್ತೇನೆ. ಶ್ರೀಲಂಕಾ ಸರಣಿಯಲ್ಲಿ ನಾನು ಎರಡು ಬಾರಿ ಗೋಲ್ಡನ್ ಡಕ್ ಆದೆ. ಸರಣಿ ಬಳಿಕ ಮನೆಗೆ ಮರಳಿದಾಗ ಮುಂದೆ ಏನಾಗುತ್ತೋ ಎಂಬ ಆತಂಕ ನನ್ನಲ್ಲಿ ಮನೆ ಮಾಡಿತ್ತು. ಆದರೆ, ಕೋಚ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ನನ್ನ ಬೆನ್ನಿಗೆ ನಿಂತರು ಎಂದು ಸಂಜು ಹೇಳಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಆರ್ಜಿಐ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ, ಎಡಗೈ ಆರಂಭಿಕ ಅಭಿಷೇಕ್ ಶರ್ಮ (4) ವಿಕೆಟ್ ಬೇಗನೆ ಕಳೆದುಕೊಂಡಿತು. ಆಗ ಜತೆಯಾದ ಸಂಜು ಸ್ಯಾಮ್ಸನ್ (111 ರನ್, 47 ಎಸೆತ, 11 ಬೌಂಡರಿ, 8 ಸಿಕ್ಸರ್) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (75 ರನ್, 35 ಎಸೆತ, 8 ಬೌಂಡರಿ, 5 ಸಿಕ್ಸರ್) ಬಿರುಸಿನ ಜತೆಯಾಟ ಹಾಗೂ ಸ್ಲಾಗ್ ಓವರ್ಗಳಲ್ಲಿ ರಿಯಾನ್ ಪರಾಗ್ (34 ರನ್, 13 ಎಸೆತ, 1 ಬೌಂಡರಿ, 4 ಸಿಕ್ಸರ್)- ಹಾರ್ದಿಕ್ ಪಾಂಡ್ಯ (47 ರನ್, 18 ಎಸೆತ, 4 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಬಲದಿಂದ 6 ವಿಕೆಟ್ಗೆ 297 ರನ್ ಪೇರಿಸಿತು. 25 ಬೌಂಡರಿ, 22 ಸಿಕ್ಸರ್ ಸಿಡಿಸಿದರೂ, ಕೇವಲ 3 ರನ್ಗಳಿಂದ 300 ರನ್ ಸಾಧನೆಯಿಂದ ವಂಚಿತವಾದ ಭಾರತ, ಟಿ20 ಕ್ರಿಕೆಟ್‌ನಲ್ಲಿ ಟೆಸ್ಟ್ ರಾಷ್ಟ್ರಗಳ ಪೈಕಿ ಸರ್ವಾಧಿಕ ಮೊತ್ತದ ದಾಖಲೆ ಬರೆಯಿತು. ಪ್ರತಿಯಾಗಿ ಸೋಲಿನ ಅಂತರ ತಗ್ಗಿಸಲಷ್ಟೇ ಹೋರಾಡಿದ ಬಾಂಗ್ಲಾ, 7 ವಿಕೆಟ್ಗೆ 164 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಅಬ್ಬರಿಸಿದ ಸಂಜು-ಸೂರ್ಯ: ಆರಂಭಿಕ 2 ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ವಿಫಲವಾಗಿದ್ದ ಸಂಜು ಸ್ಯಾಮ್ಸನ್ 3ನೇ ಪಂದ್ಯದಲ್ಲಿ ಲಯಕ್ಕೆ ಮರಳಿದರು. ಟಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್ನಲ್ಲಿ ಸತತ 4 ಬೌಂಡರಿ ಗಳಿಸಿದ ಸ್ಯಾಮ್ಸನ್ ಆಕ್ರಮಣಕಾರಿ ಆಟಕ್ಕಿಳಿದರು. ಮರು ಓವರ್ನಲ್ಲಿ ಅಭಿಷೇಕ್ ಡಗೌಟ್ ಸೇರಿದರು. ಆಗ ಸಂಜು ಜತೆಯಾದ ಸೂರ್ಯಕುಮಾರ್ ಬಾಂಗ್ಲಾ ಬೌಲರ್ಗಳನ್ನು ಬೆಂಡೆತ್ತುವ ಮೂಲಕ ರನ್ವುಳೆ ಸುರಿಸಿದರು. ಇವರಿಬ್ಬರು 2ನೇ ವಿಕೆಟ್ಗೆ ಪ್ರತಿ ಓವರ್ಗೆ 15.04ರ ಸರಾಸರಿಯಂತೆ 70 ಎಸೆತಗಳಲ್ಲಿ 173 ರನ್ ಕಸಿದರು. ಸ್ಯಾಮ್ಸನ್ ಆಟಕ್ಕೆ ಸೂರ್ಯ ಉತ್ತಮ ಬೆಂಬಲ ಒದಗಿಸಿ ಭದ್ರ ಅಡಿಪಾಯ ಹಾಕಿದರು. 7.1 ಓವರ್ಗಳಲ್ಲಿ 100ರ ಗಡಿ ದಾಟಿಸಿದ ಇವರಿಬ್ಬರು ರನ್ಗತಿಗೆ ಮತ್ತಷ್ಟು ಚುರುಕು ನೀಡಿದರು. 40 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ಸಂಜು ಆರಂಭಿಕ ಸ್ಥಾನವನ್ನು ಸಮರ್ಥಿಸಿಕೊಂಡರು. ಸೂರ್ಯ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಜೋಡಿಯನ್ನು ಮುಸ್ತಾಫಿಜುರ್ ಬೇರ್ಪಡಿಸಿದರು. 14 ಓವರ್ಗೆ ಟೀಮ್ ಇಂಡಿಯಾ 2 ವಿಕೆಟ್ಗೆ 201 ರನ್ಗಳಿಸಿತು. (ಏಜೆನ್ಸೀಸ್)