

Sanju Samson: ಸೆ.09ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ ಟೂರ್ನಿಗೂ ಮುನ್ನವೇ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಕೇವಲ 42 ಎಸೆತಗಳಲ್ಲಿ ಶತಕದಾಟ ತೋರುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದಾರೆ.
ಕೇರಳ ಕ್ರಿಕೆಟ್ ಲೀಗ್ 2025ರಲ್ಲಿ ಸಂಜು ಸ್ಯಾಮ್ಸನ್ ಕೊಚ್ಚಿ ಬ್ಲೂ ಟೈಗರ್ಸ್ ಪರ ಪಂದ್ಯವನ್ನಾಡುತ್ತಿದ್ದು, ಭಾನುವಾರ ನಡೆದ ಮೇಷ ಕೊಲ್ಲಂ ಸೈಲರ್ಸ್ ವಿರುದ್ಧದ ಪಂದ್ಯದಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಪರ ಮೈದಾನಕ್ಕಿಳಿದ ಸ್ಯಾಮ್ಸನ್, ತಮ್ಮ ಬ್ಯಾಟ್‌ನಿಂದ ಸ್ಫೋಟಕ ಇನ್ನಿಂಗ್ಸ್ ನೀಡಿದರು. ಆರಂಭಿಕರಾಗಿ ಕ್ರೀಸ್‌ಗೆ ಬಂದ ಸಂಜು, ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ನಡೆಸಿದರು. ತಮ್ಮ ಎದುರಾಳಿ ಬೌಲರ್‌ಗಳಿಗೆ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಬೆವರಿಳಿಸಿದರು. ಕೇವಲ 42 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಇದು ಕ್ರಿಕೆಟ್ ಪ್ರಿಯರನ್ನು ರಂಜಿಸಿತು. ಸ್ಯಾಮ್ಸನ್ ಶತಕದಾಟದ ವಿಡಿಯೋ ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಇನ್ನಿಂಗ್ಸ್‌ನ ಮೊದಲ 16 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್, ಮುಂದಿನ 26 ಎಸೆತಗಳಲ್ಲಿ ಶತಕ ತಲುಪಿದರು. ಒಟ್ಟು 42 ಎಸೆತಗಳಲ್ಲಿ 13 ಬೌಂಡರಿ ಮತ್ತು ಐದು ಬೃಹತ್ ಸಿಕ್ಸರ್ ಸಿಡಿಸುವ ಮೂಲಕ ಸಂಜು ಶತಕವನ್ನು ದಾಖಲಿಸಿದರು. ಈ ಸ್ಫೋಟಕ ಇನ್ನಿಂಗ್ಸ್ನಿಂದ ಬಿಸಿಸಿಐ ಆಯ್ಕೆಗಾರರ ಗಮನ ಸೆಳೆದಿರುವ ಸ್ಯಾಮ್ಸನ್, ಏಷ್ಯಾ ಕಪ್‌ನಲ್ಲಿ ಆರಂಭಿಕ ಸ್ಥಾನ ನನ್ನದು ಎಂಬ ಖಡಕ್ ಸಂದೇಶವನ್ನು ಪರೋಕ್ಷವಾಗಿ ಗಿಲ್‌ಗೆ ಕೊಟ್ಟಿದ್ದಾರೆ ಎಂದೇ ಹೇಳಬಹುದು.
ಈಗಾಗಲೇ ಬಿಸಿಸಿಐ ಏಷ್ಯಾ ಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಿದೆ. ಈ ಟೂರ್ನಿ ಟಿ20 ಮಾದರಿಯಲ್ಲಿ ನಡೆಯಲಿದೆ. ನಾಯಕನಾಗಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದರೆ, ಉಪನಾಯಕನಾಗಿ ಶುಭಮನ್ ಗಿಲ್ ಕಣಕ್ಕಿಳಿಯಲಿದ್ದಾರೆ. ಆದಾಗ್ಯೂ, ತಂಡ ಘೋಷಣೆಯಾಗಿದ್ದೇ ಆದರೂ, ಯಾರು ಯಾವ ಸ್ಥಾನದಲ್ಲಿ ಆಡಲಿದ್ದಾರೆ? ಮೈದಾನಕ್ಕೆ ಬರಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬ್ಯಾಟಿಂಗ್ ಲೈನ್ ಅಪ್ ಹೇಗಿರುತ್ತದೆ ಎಂಬುದರ ಕುರಿತು ಸದ್ಯ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭಾರತ ಪರ ಯಾರಿಬ್ಬರು ಆರಂಭಿಕರಾಗಿ ಬರುತ್ತಾರೆ? ಎಂಬ ಕುತೂಹಲ ಹಲವರಿಗಿದೆ,(ಏಜೆನ್ಸೀಸ್).