

ಹೈದರಾಬಾದ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ತಂಗಿ ಅನಮ್ ಮಿರ್ಜಾ ಕಳೆದ ವರ್ಷ ಡಿಸೆಂಬರ್ನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಪುತ್ರ ಮೊಹಮದ್ ಅಸದುದ್ದೀನ್ ಅವರನ್ನು ವಿವಾಹವಾಗಿದ್ದರು. ಆ ಸಮಯದ ನೆನಪುಗಳನ್ನು ಒಳಗೊಂಡ ವಿಡಿಯೋ ಮತ್ತು ಚಿತ್ರಗಳನ್ನು ಅನಮ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ವಿವಾಹದ ಸಮಯದಲ್ಲಿ ಸಾನಿಯಾ ಮಿರ್ಜಾ ಪತಿ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್ ಗೈರು ಹಾಜರಾಗಿದ್ದ ಬಗ್ಗೆ ನೆಟ್ಟಿಗರಿಂದ ಅನಮ್ ಟ್ರೋಲ್ಗಳನ್ನು ಎದುರಿಸಿದ್ದರು. ಇದಕ್ಕೀಗ ಅನಮ್ ದಿಟ್ಟ ಉತ್ತರವನ್ನೇ ನೀಡಿದ್ದಾರೆ.
ಅನಮ್ ವಿವಾಹದ ನೆನಪುಗಳ ವಿಡಿಯೋವನ್ನು ಪ್ರಕಟಿಸಿದ ಬೆನ್ನಲ್ಲೇ ನೆಟ್ಟಿಗರು, ಶೋಯಿಬ್ ಮಲಿಕ್ ಯಾಕೆ ವಿವಾಹಕ್ಕೆ ಹಾಜರಾಗಿರಲಿಲ್ಲ ಎಂಬ ಬಗ್ಗೆ ವಿವಿಧ ಪ್ರಶ್ನೆಗಳ ಸುರಿಮಳೆ ಹರಿಸಿದ್ದರು. ಅನಮ್ ಅವರ ಭಾವ ವಿವಾಹದ ಯಾವುದೇ ಚಿತ್ರ ಮತ್ತು ವಿಡಿಯೋಗಳಲ್ಲಿ ಕಾಣಿಸುತ್ತಿರಲಿಲ್ಲ. ಜಿಜು ಯಾಕೆ ಬರಲಿಲ್ಲ ಎಂಬ ಬಗ್ಗೆ ನೆಟ್ಟಿಗರಿಂದ ಸತತ ಪ್ರಶ್ನೆಗಳು ಎದುರಾದ ಬೆನ್ನಲ್ಲೇ ಅನಮ್ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ, ಶೋಯಿಬ್ ಮಲಿಕ್ ಗೈರು ಹಾಜರಿಯನ್ನು ಸಮರ್ಥಿಸುವ ಉತ್ತರವನ್ನು ಪ್ರಕಟಿಸಿದ್ದರು.
'ನಾವೆಲ್ಲರೂ ವಿವಾಹದಂದು ಶೋಯಿಬ್ ಮಲಿಕ್ ಅವರನ್ನು ಮಿಸ್ ಮಾಡಿಕೊಂಡೆವು. ಹಲವಾರು ಕಾರಣಗಳಿಂದಾಗಿ ಅವರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ವಿವಾಹದ ವೇಳೆ ಅವರಿರಲಿಲ್ಲ ಎಂಬ ಮಾತ್ರಕ್ಕೆ ನಮಗೆ ದ್ವೇಷದ ಸಂದೇಶಗಳನ್ನು ಕಳುಹಿಸುವುದನ್ನು ನಿಲ್ಲಿಸಿ. ಅವರು ವಿವಾಹಕ್ಕೆ ಹಾಜರಾಗಲು ಸಾಧ್ಯವಾಗುತ್ತಿದ್ದರೆ, ಖಂಡಿತವಾಗಿಯೂ ಇಲ್ಲಿನ ಚಿತ್ರಗಳು ಮತ್ತು ವಿಡಿಯೋಗಳಲ್ಲೂ ಅವರು ಇರುತ್ತಿದ್ದರು. ರಿಲ್ಯಾಕ್ಸ್' ಎಂದು ಅನಮ್ ಮಿರ್ಜಾ ಬರೆದುಕೊಂಡಿದ್ದಾರೆ.
25 ವರ್ಷದ ಅನಮ್ ಮಿರ್ಜಾ 2016ರಲ್ಲಿ ಅಕ್ಬರ್ ರಶೀದ್ ಎಂಬವರನ್ನು ವಿವಾಹವಾಗಿದ್ದರು. ಆದರೆ ಬಳಿಕ 2018ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ 2019ರ ಕೊನೆಯಲ್ಲಿ ಅಜರುದ್ದೀನ್ ಪುತ್ರನ ಜತೆಗೆ 2ನೇ ವಿವಾಹವಾಗಿದ್ದರು.