

ನವದೆಹಲಿ: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಭಾನುವಾರದಿಂದ ಅಭ್ಯಾಸ ಆರಂಭಿಸಿದರು. ತೆಲಂಗಾಣ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಹೈದಾರಾಬಾದ್‌ನಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತಿ ಶಿಬಿರವೂ ಪುಲ್ಲೆಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಆರಂಭವಾಗಿದೆ. ಬಹುತೇಕ ಷಟ್ಲರ್‌ಗಳು ಶಿಬಿರದಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ. ಇದೀಗ ಪ್ರತ್ಯೇಕವಾಗಿ ಅಭ್ಯಾಸ ಆರಂಭಿಸಿರುವ ಸೈನಾ ನೆಹ್ವಾಲ್, ಎರಡು ವಾರಗಳ ನಂತರ ಶಿಬಿರ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸೈನಾ, ಸಿಂಧು ಸೇರಿದಂತೆ ಒಲಿಂಪಿಕ್ಸ್‌ನಲ್ಲಿ ಪದಕ ಭರವಸೆ ಇರುವ 8 ಷಟ್ಲರ್‌ಗಳನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ.
ತರಬೇತಿ ಶಿಬಿರದಿಂದ ದೂರ ಉಳಿದಿರುವ ಸೈನಾ ನೆಹ್ವಾಲ್, 2014 ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಹಾಗೂ ಪತಿ ಪಿ.ಕಶ್ಯಪ್ ಹಾಗೂ ಕಂಚಿನ ಪದಕ ವಿಜೇತ ಆರ್‌ಎಂವಿ ಗುರು ಸಾಯಿದತ್ ಮಾರ್ಗದರ್ಶನದಲ್ಲಿ ಪ್ರತ್ಯೇಕವಾಗಿ ತರಬೇತಿ ಆರಂಭಿಸಿದ್ದಾರೆ. ಗೋಪಿಚಂದ್ ಅಕಾಡೆಮಿ ಬಳಿ ಇರುವ ಮತ್ತೊಂದು ಅಕಾಡೆಮಿಯಲ್ಲಿ ಸೈನಾ ನೆಹ್ವಾಲ್ ತರಬೇತಿ ಆರಂಭಿಸಿದ್ದು, ಇದೀಗ ಪ್ರಾಥಮಿಕ ಹಂತದಿಂದ ತರಬೇತಿ ಆರಂಭಿಸಲಾಗಿದೆ ಎಂದು ಪತಿ ಪಿ.ಕಶ್ಯಪ್ ತಿಳಿಸಿದ್ದಾರೆ. ಒಂದೆರಡು ವಾರಗಳಲ್ಲಿ ಸೈನಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಲಿದ್ದಾರೆ ಎಂದು ಕಶ್ಯಪ್ ತಿಳಿಸಿದ್ದಾರೆ.
ಇದನ್ನೂ ಓದಿ: ನಾಯಿಗಳೂ ಮಾತನಾಡುತ್ತವೆ ಎಂದ ವೀರೇಂದ್ರ ಸೆಹ್ವಾಗ್!
ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್, ಅಶ್ವಿನಿ ಪೊನ್ನಪ್ಪ ಇನ್ನು ತರಬೇತಿ ಶಿಬಿರಕ್ಕೆ ಹಾಜರಾಗಿಲ್ಲ. ಚಿರಾಗ್ ಶೆಟ್ಟಿ ಮುಂಬೈನಲ್ಲಿದ್ದರೆ, ಸಾತ್ವಿಕ್ ಆಂಧ್ರದ ಅಮಲಾಪುರದಲ್ಲಿದ್ದಾರೆ. ಅಶ್ವಿನಿ ಪೊನ್ನಪ್ಪ ಬೆಂಗಳೂರಿನಲ್ಲಿ ಪ್ರಕಾಶ್ ಪಡುಕೋಣೆ ಕೇಂದ್ರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿಶ್ವ ಚಾಂಪಿಯನ್ ಪಿವಿ ಸಿಂಧು, ಬಿ.ಸಾಯಿ ಪ್ರಣೀತ್, ಸಿಕ್ಕಿ ರೆಡ್ಡಿ ಶುಕ್ರವಾರದಿಂದಲೇ ಅಭ್ಯಾಸ ಆರಂಭಿಸಿದರು. ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್ ಕೂಡ ಗುಂಟೂರಿನಲ್ಲಿದ್ದು, ಒಂದು ವಾರದ ಬಳಿಕ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಸಿದ್ಧತೆ ಹಿನ್ನೆಲೆಯಲ್ಲಿ ತರಬೇತಿ ಶಿಬಿರ ಆಯೋಜಿಸಲು ತೆಲಂಗಾಣ ಸರ್ಕಾರ ಆ.1 ರಂದು ಅನುಮತಿ ನೀಡಿತ್ತು.