ಶಿಬಿರಗಳನ್ನು ಮುಂದೂಡಿದ ಸಾಯ್

sai mar 20
Published on

ನವದೆಹಲಿ: ಕರೊನಾ ಭೀತಿಯ ಬಗ್ಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯ ಹೊರತಾಗಿ ಇತರ ಎಲ್ಲ ರಾಷ್ಟ್ರೀಯ ಶಿಬಿರಗಳನ್ನು ಮುಂದೂಡಿದೆ. ಆರೋಗ್ಯ ಸಚಿವಾಲಯದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಕ್ರೀಡಾ ಸಚಿವಾಲಯ ಈಗಾಗಲೆ ಆದೇಶ ಹೊರಡಿಸಿದೆ. ಇದರಿಂದಾಗಿ ಸಾಯ್, ಶಿಬಿರಗಳನ್ನು ಮುಂದೂಡಿರುವ ಜತೆಗೆ ಯಾವುದೇ ಟೂರ್ನಿ, ಸೆಮಿನಾರ್ ಅಥವಾ ಕಾರ್ಯಾಗಾರಗಳನ್ನು ನಡೆಸಬಾರದೆಂದು ತನ್ನ ಅಂಗಸಂಸ್ಥೆಯಾಗಿರುವ ಎಲ್ಲ ರಾಜ್ಯದ ಕೇಂದ್ರಗಳಿಗೆ ಸೂಚನೆ ನೀಡಿದೆ.

ಸಾಯ್ ಸದ್ಯ ಮಾರ್ಚ್ 20ರವರೆಗೆ ತನ್ನ ಹಾಸ್ಟೆಲ್ ವ್ಯವಸ್ಥೆಗಳನ್ನು ತೆರೆದಿಡಲು ನಿರ್ಧರಿಸಿದೆ. ಕ್ರೀಡಾಪಟುಗಳ ವಾಸ್ತವ್ಯಕ್ಕೆ ಯಾವುದೇ ರೀತಿಯ ತೊಂದರೆಗಳಾಗಬಾರದೆಂದು ಈ ಕ್ರಮ ತೆಗೆದುಕೊಂಡಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಪರೀಕ್ಷೆಗಳನ್ನು ಎದುರಿಸಬೇಕಾಗಿರುವ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಇದೇ ವೇಳೆ ಅವರು ಆರೋಗ್ಯದ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಇನ್ನು ಟೋಕಿಯೊ ಒಲಿಂಪಿಕ್ಸ್​ಗೆ ಸಿದ್ಧತೆ ನಡೆಸುತ್ತಿರುವವರು ಮಾತ್ರ ರಾಷ್ಟ್ರೀಯ ಶಿಬಿರದಲ್ಲಿ ಮುಂದುವರಿಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net