ಮಿಂಚಿದ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್; ಆರ್‌ಸಿಬಿಗೆ ಸತತ 2ನೇ ಜಯ

rcb web
Published on

ಚೆನ್ನೈ: 16ನೇ ಓವರ್ ಬಳಿಕ ದಿಢೀರ್ ಚಿತ್ರಣ ಬದಲಾವಣೆ ಕಂಡ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವಿನ ಅದೃಷ್ಟ ಒಲಿಸಿಕೊಂಡಿತು. ಒಂದೇ ಓವರ್‌ನಲ್ಲಿ 3 ವಿಕೆಟ್ ಕಬಳಿಸಿದ ಸ್ಪಿನ್ನರ್ ಶಾಬಾಜ್ ಅಹ್ಮದ್ (7ಕ್ಕೆ 3) ಸಾಹಸದಿಂದ ವಿರಾಟ್ ಕೊಹ್ಲಿ ಬಳಗ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಐಪಿಎಲ್-14ರ ತನ್ನ 2ನೇ ಪಂದ್ಯದಲ್ಲಿ 6 ರನ್‌ಗಳಿಂದ ಗೆಲುವಿನ ನಗೆ ಬೀರಿತು.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ (59 ರನ್, 41 ಎಸೆತ, 5 ಬೌಂಡರಿ, 3 ಸಿಕ್ಸರ್) ದಿಟ್ಟ ಹೋರಾಟದ ಬಲದಿಂದ 8 ವಿಕೆಟ್‌ಗೆ 149 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್‌ ತಂಡ ನಾಯಕ ಡೇವಿಡ್ ವಾರ್ನರ್ (54 ರನ್, 37 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಕನ್ನಡಿಗ ಮನೀಷ್ ಪಾಂಡೆ (38 ರನ್, 39 ಎಸೆತ, 2 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ ಜಯದತ್ತ ಮುನ್ನಡೆದರೂ, ಅಂತಿಮವಾಗಿ 9 ವಿಕೆಟ್‌ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.

ವಾರ್ನರ್-ಮನೀಷ್ ಪಾಂಡೆ ಜೋಡಿ 2ನೇ ವಿಕೆಟ್‌ಗೆ 83 ರನ್ ಸೇರಿಸಿದಾಗ ಪಂದ್ಯ ಆರ್‌ಸಿಬಿ ಕೈಜಾರುವ ಲಕ್ಷಣ ಕಂಡಿತು. ಆದರೆ, ಕೊನೇ 4 ಓವರ್‌ಗಳಲ್ಲಿ 35 ರನ್ ಗಳಿಸುವ ಸವಾಲು ಎದುರಾದಾಗ ಸನ್‌ರೈಸರ್ಸ್‌ ದಿಢೀರ್ ಕುಸಿತ ಕಂಡಿತು. ಚೆಪಾಕ್ ಪಿಚ್‌ನಲ್ಲಿ ಪ್ರತಿ ರನ್‌ಗೆ ಪರದಾಡಿದ ಸನ್‌ರೈಸರ್ಸ್‌ ತಂಡ 27 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು.

ಸನ್‌ಗೆ ಅಹ್ಮದ್ ಶಾಕ್

ಸನ್‌ರೈಸರ್ಸ್‌ ಇನಿಂಗ್ಸ್‌ನ 17ನೇ ಓವರ್ ಎಸೆದ ಶಾಬಾಜ್ ಅಹ್ಮದ್, ಜಾನಿ ಬೇರ್‌ಸ್ಟೋ (12), ಮನೀಷ್ ಪಾಂಡೆ ಮತ್ತು ಅಬ್ದುಲ್ ಸಮಾದ್ (0) ವಿಕೆಟ್ ಕಬಳಿಸಿ ಪಂದ್ಯವನ್ನು ಆರ್‌ಸಿಬಿ ತಂಡದತ್ತ ತಿರುಗಿಸಿದರು. ನಂತರ ಕಳೆದ ಪಂದ್ಯ ಹೀರೋ ಹರ್ಷಲ್ ಪಟೇಲ್ ಸನ್‌ರೈಸರ್ಸ್‌ಗೆ ಮತ್ತೆರಡು ಆಘಾತ ನೀಡಿದರು. ಕೊನೇ ಓವರ್‌ನಲ್ಲಿ ಸನ್‌ರೈಸರ್ಸ್‌ಗೆ 16 ರನ್ ಅಗತ್ಯವಿದ್ದಾಗ ಹರ್ಷಲ್ 9 ರನ್ ಮಾತ್ರ ಬಿಟ್ಟುಕೊಟ್ಟರು.

ಮೊತ್ತ ಏರಿಸಿದ ಮ್ಯಾಕ್ಸ್‌ವೆಲ್

ಕೊಹ್ಲಿ-ಮ್ಯಾಕ್ಸ್‌ವೆಲ್ ಜೋಡಿ 3ನೇ ವಿಕೆಟ್‌ಗೆ 38 ಎಸೆತಗಳಲ್ಲಿ 44 ರನ್ ಜತೆಯಾಟವಾಡಿತು. ಜೇಸನ್ ಹೋಲ್ಡರ್ ಎಸೆದ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಕೊಹ್ಲಿ (33 ರನ್, 29 ಎಸೆತ, 4 ಬೌಂಡರಿ), ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಜಯ್ ಶಂಕರ್‌ಗೆ ಕ್ಯಾಚ್ ನೀಡಿದರು. ಕೊಹ್ಲಿ ಔಟಾದ ಬೆನ್ನಲ್ಲೇ ಆರ್‌ಸಿಬಿ 18 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಕುಸಿಯಿತು. ಎಬಿ ಡಿವಿಲಿಯರ್ಸ್‌ 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ವಾಷಿಂಗ್ಟನ್ ಸುಂದರ್ (8) ಮತ್ತು ಡೇನಿಯಲ್ ಕ್ರಿಶ್ಚಿಯನ್ (1) ಕೂಡ ಬೇಗನೆ ನಿರ್ಗಮಿಸಿದಾಗ ಆರ್‌ಸಿಬಿ ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಹುಟ್ಟಿತು. ಆಗ ಬಿರುಸಿನ ಆಟಕ್ಕಿಳಿದ ಮ್ಯಾಕ್ಸ್‌ವೆಲ್ ತಂಡದ ಮೊತ್ತವನ್ನು 150ರ ಸನಿಹಕ್ಕೇರಿಸಲು ಮ್ಯಾಕ್ಸಿಮಮ್ ಹೋರಾಟ ನಡೆಸಿದರು. ಕೈಲ್ ಜೇಮಿಸನ್ (12) ಜತೆ 15 ಎಸೆತಗಳಲ್ಲಿ 27 ರನ್ ಕಸಿದರು. ಹೋಲ್ಡರ್ ಎಸೆದ ಕೊನೇ ಓವರ್‌ನ ಮೊದಲ ಎಸೆತಕ್ಕೆ ಜೇಮಿಸನ್ ಔಟಾದರೆ, ನಂತರದ 4 ಎಸೆತಗಳಲ್ಲಿ ಮ್ಯಾಕ್ಸ್‌ವೆಲ್ 13 ರನ್ ಕಸಿದು ಅಂತಿಮ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಕೀಪರ್ ಸಾಹಗೆ ಕ್ಯಾಚ್ ನೀಡಿದರು. ಮ್ಯಾಕ್ಸ್‌ವೆಲ್ ಕೊನೇ 3 ಓವರ್‌ಗಳಲ್ಲಿ 39 ರನ್ ಕಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net