ಸಚಿನ್ ನಿವೃತ್ತಿಯಾದಾಗ ಕಣ್ಣೀರಿಟ್ಟಿದ್ದರು ಕ್ರಿಸ್ ಗೇಲ್!

sachin2
Published on

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ 2013ರ ನವೆಂಬರ್ 16ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಭಾವಪೂರ್ಣ ವಿದಾಯ ಪಡೆದಿದ್ದರು. ಆ ವೇಳೆ ಅವರು ಮಾಡಿದ ವಿದಾಯ ಭಾಷಣವನ್ನು ಕೇಳಿ ಎದುರಾಳಿ ವೆಸ್ಟ್ ಇಂಡೀಸ್ ತಂಡದಲ್ಲಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ಭಾವುಕರಾಗಿ ಕಣ್ಣೀರಿಟ್ಟಿದ್ದರಂತೆ. ವಿಂಡೀಸ್ ತಂಡದ ಆಲ್ರೌಂಡರ್ ಕಿರ್ಕ್ ಎಡ್ವರ್ಡ್ಸ್ ಇದನ್ನು ಬಹಿರಂಗಪಡಿಸಿದ್ದಾರೆ.

ಪ್ರವಾಸಿ ವಿಂಡೀಸ್ ವಿರುದ್ಧದ 2 ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಸಚಿನ್ ತವರು ಮುಂಬೈನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಸಚಿನ್ ಶತಕ ಸಿಡಿಸುವ ನಿರೀಕ್ಷೆ ಎಲ್ಲ ಕ್ರಿಕೆಟ್ ಪ್ರೇಮಿಗಳಲ್ಲಿತ್ತು. ಆದರೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಚಿನ್ 74 ರನ್ ಗಳಿಸಿ ಔಟಾಗಿದ್ದರು. ನರಸಿಂಗ್ ದೇವನಾರಾಯಣ್ ಎಸೆತದಲ್ಲಿ ಅವರು ಸ್ಲಿಪ್‌ನಲ್ಲಿದ್ದ ಡರೇನ್ ಸ್ಯಾಮ್ಮಿಗೆ ಕ್ಯಾಚ್ ನೀಡಿ ಔಟಾಗಿದ್ದರು. ವಿಂಡೀಸ್ ತಂಡ ಮೂರೇ ದಿನಗಳಲ್ಲಿ ಇನಿಂಗ್ಸ್ ಸೋಲು ಕಂಡ ಕಾರಣ ಅದುವೇ ಸಚಿನ್ ಅವರ ಕೊನೆಯ ಇನಿಂಗ್ಸ್ ಆಗಿತ್ತು.

‘ಸಚಿನ್ ಅವರ 200ನೇ ಟೆಸ್ಟ್ ಪಂದ್ಯದ ವೇಳೆ ನಾನು ಅಲ್ಲಿದ್ದೆ. ಅದು ನನಗೂ ಅತ್ಯಂತ ಭಾವುಕ ಕ್ಷಣವಾಗಿತ್ತು. ಸಚಿನ್ ವಿದಾಯ ಭಾಷಣದ ವೇಳೆ ನಾನು ಕ್ರಿಸ್ ಗೇಲ್ ಅವರ ಪಕ್ಕದಲ್ಲೇ ನಿಂತಿದ್ದೆ. ನಾವಿಬ್ಬರೂ ಸಾಕಷ್ಟು ನಿಯಂತ್ರಿಸಿಕೊಂಡರೂ, ಆ ಕ್ಷಣದಲ್ಲಿ ಕಣ್ಣಿನಿಂದ ನೀರು ಹರಿದಿತ್ತು. ಸಚಿನ್ ತೆಂಡುಲ್ಕರ್ ಕ್ರಿಕೆಟ್ ಆಡುವುದನ್ನು ನಾವು ಇನ್ನೆಂದೂ ನೋಡಲಾರವೆ ಎಂಬುದನ್ನು ತಿಳಿದ ಆ ಕ್ಷಣ ಅತ್ಯಂತ ಭಾವನಾತ್ಮಕವಾಗಿತ್ತು’ ಎಂದು ಕಿರ್ಕ್ ಎಡ್ವರ್ಡ್ಸ್ ವಿವರಿಸಿದ್ದಾರೆ. ಆ ಪಂದ್ಯದಲ್ಲಿ ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net