

ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಆಡಿ ಬೆಳೆದ, ಕನಸಿನ ವಿಶ್ವಕಪ್ ಟ್ರೋಫಿ ಎತ್ತಿಹಿಡಿದ ಮತ್ತು ವೃತ್ತೀಜಿವನಕ್ಕೆ ವಿದಾಯ ಸಾರಿದ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ಅವರ ಕಂಚಿನ ಪ್ರತಿಮೆ ಸ್ಥಾಪಿಸಲ್ಪಟ್ಟಿದೆ. ಈ ಬಗ್ಗೆ ಸಚಿನ್ ಅವರೇನೋ ಸಂಭ್ರಮ ವ್ಯಕ್ತಪಡಿಸಿದರು. ಆದರೆ ಅವರ ಅಭಿಮಾನಿಗಳು ಖುಷಿಯಾದಂತಿಲ್ಲ. ಯಾಕೆಂದರೆ ಈ ಪ್ರತಿಮೆ ಸಚಿನ್ ಅವರಂತೆ ಕಾಣಿಸುತ್ತಿಲ್ಲ. ಬದಲಾಗಿ ಆಸ್ಟ್ರೆಲಿಯಾದ ಬ್ಯಾಟರ್ ಸ್ಟೀವನ್ ಸ್ಮಿತ್ ಅವರಂತೆ ಕಾಣಿಸುತ್ತಿದೆ!
ಸಚಿನ್ ತೆಂಡುಲ್ಕರ್ರ ಪ್ರತಿಮೆ ಅವರಿಗಿಂತ ಹೆಚ್ಚಾಗಿ ಸ್ಟೀವನ್ ಸ್ಮಿತ್ರನ್ನೇ ಹೋಲುತ್ತಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರತಿಮೆ ಮತ್ತು ಸ್ಟೀವನ್ ಸ್ಮಿತ್ ಇಬ್ಬರೂ ಭಾರಿ ಟ್ರೋಲ್ಗೆ ಒಳಗಾಗಿದ್ದಾರೆ.
ಸಚಿನ್ ಚೆಂಡನ್ನು ಗಾಳಿಯಲ್ಲಿ ಬಾರಿಸುವ ಸ್ಟ್ರೈಟ್ ಡ್ರೈವ್ ಹೊಡೆತದ ಪ್ರತಿಮೆ ಇದಾಗಿದೆ. ಅಲ್ಲದೆ ಪ್ರತಿಮೆ ಹೆಲ್ಮೆಟ್ ಕೂಡ ಒಳಗೊಂಡಿದೆ. ಹೀಗಾಗಿ ಸಚಿನ್ ಮುಖ ಸರಿಯಾಗಿ ಕಾಣಿಸುತ್ತಿಲ್ಲ. ಇದರಿಂದಾಗಿ ಅಭಿಮಾನಿಗಳಿಗೆ ಈ ಮುಖ ಸ್ಟೀವನ್ ಸ್ಮಿತ್ ಅವರಂತೆ ಕಾಣಿಸುತ್ತಿದೆ. ಹಲವಾರು ಕ್ರಿಕೆಟ್ ಪ್ರೇಮಿಗಳೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿ ಎಕ್ಸ್ನಲ್ಲಿ ಕಾಮೆಂಟ್ಗಳನ್ನು ಹಾಕಿದ್ದಾರೆ.