

ನವದೆಹಲಿ: ಭಾರತೀಯ ಕ್ರಿಕೆಟ್ ಆಡಳಿತದ ಅತ್ಯಂತ ಕುತೂಹಲಕಾರಿ ಬೆಳವಣಿಗೆಯಲ್ಲಿ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ದಿಗ್ಗಜ ಸಚಿನ್ ತೆಂಡುಲ್ಕರ್ ಹೆಸರು ಕೇಳಿಬಂದಿದೆ. ಬಿಸಿಸಿಐನ ಮುಂದಿನ ಅಧ್ಯಕ್ಷ ಪಟ್ಟದ ಜವಾಬ್ದಾರಿಯನ್ನು ತೆಂಡುಲ್ಕರ್ಗೆ ವಹಿಸಲು ಸಿದ್ಧತೆ ನಡೆದಿದೆ. ಆವರ್ತನ ಪದ್ಧತಿಯನ್ವಯ ಈ ಬಾರಿ ಅಧ್ಯಕ್ಷ ಹುದ್ದೆಯನ್ನು ಪಶ್ಚಿಮ ವಲಯದ ಅಭ್ಯರ್ಥಿಗೆ ನೀಡಲು ಬಿಸಿಸಿಐ ವಲಯದಲ್ಲಿ ಒಲವು ಮೂಡಿದೆ. ಹೀಗಾಗಿ ಪಶ್ಚಿಮ ವಲಯದ ಪ್ರಮುಖ ಕ್ರಿಕೆಟಿಗನಿಗೆ ಈ ಹುದ್ದೆಯನ್ನು ವಹಿಸುವ ಬಿಸಿಸಿಐ ಯೋಜನೆಯ ಅನ್ವಯ, ತೆಂಡುಲ್ಕರ್ಗೆ ಆಫರ್ ನೀಡಲಾಗಿದೆ. ಸಚಿನ್ ಇದಕ್ಕೆ ಒಪ್ಪುವರೇ ಎಂಬುದು ಈಗಿರುವ ಬಹುದೊಡ್ಡ ಕುತೂಹಲವಾಗಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ನಲ್ಲಿ ನಡೆದ ಆಂಡರ್ಸನ್-ತೆಂಡುಲ್ಕರ್ ಟ್ರೋಫಿಯ ಸಮಯದಲ್ಲೇ ಈ ಸಂಬಂಧ ಸಚಿನ್ ಜತೆಗೆ ಚರ್ಚಿಸಲಾಗಿತ್ತು. ಆದರೆ ಸಚಿನ್ ಇದಕ್ಕೆ ಸ್ಪಷ್ಟವಾದ ಉತ್ತರವನ್ನು ನೀಡಿರಲಿಲ್ಲ ಎನ್ನಲಾಗಿದೆ. ಬಿಸಿಸಿಐ ವಾರ್ಷಿಕ ಮಹಾಸಭೆ ಸೆ.28ರಂದು ಮುಂಬೈನಲ್ಲಿ ನಿಗದಿಯಾಗಿದ್ದು, ಅದೇ ದಿನ ಹೊಸ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ.
ಬಿಸಿಸಿಐನಲ್ಲಿ ಮೊದಲಿನಿಂದಲೂ ಕ್ರೀಡಾ ಆಡಳಿತಾಧಿಕಾರಿಗಳೇ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸುತ್ತ ಬಂದಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇದು ಬದಲಾಗಿದೆ. 2019ರಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಈ ಹುದ್ದೆಗೇರಿ ಗಮನಸೆಳೆದಿದ್ದರು. ನಂತರ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಬಿಸಿಸಿಐ ಚುಕ್ಕಾಣಿ ಹಿಡಿದ ಮತ್ತೋರ್ವ ಪ್ರಮುಖ ಮಾಜಿ ಕ್ರಿಕೆಟಿಗ ಎನಿಸಿದ್ದರು. ಇದೀಗ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಮಾಜಿ ಕ್ರಿಕೆಟಿಗರೊಬ್ಬರಿಗೆ ಮೀಸಲಿಡಬೇಕೆಂಬ ಒಲವು ಬಿಸಿಸಿಐನಲ್ಲಿ ಹೆಚ್ಚಾಗಿದೆ.
ಭಾರತೀಯ ಕ್ರೀಡಾ ಆಡಳಿತದಲ್ಲಿ ಇತ್ತೀಚೆಗೆ ದೇಶದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಅಧ್ಯಕ್ಷ ಪಟ್ಟವನ್ನು ಮಾಜಿ ಕ್ರೀಡಾಪಟುಗಳಿಗೆ ನೀಡುವ ಟ್ರೆಂಡ್ ಸೃಷ್ಟಿಯಾಗಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಮಾಜಿ ಅಥ್ಲೀಟ್ ಪಿಟಿ ಉಷಾ, ಹಾಕಿ ಇಂಡಿಯಾಗೆ ಮಾಜಿ ನಾಯಕ ದಿಲೀಪ್ ರ್ಟಿಕಿ ಮತ್ತು ಅಖಿಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ ಮಾಜಿ ಫುಟ್ಬಾಲಿಗ ಕಲ್ಯಾಣ್ ಚೌಬೆ ಅಧ್ಯಕ್ಷರಾಗಿದ್ದಾರೆ. ಕ್ರಿಕೆಟ್ನಲ್ಲೂ ಇದೇ ಟ್ರೆಂಡ್ ಮುಂದುವರಿಸಲಾಗುವುದು ಎನ್ನಲಾಗುತ್ತಿದೆ.
ಪಶ್ಚಿಮ ವಲಯಕ್ಕೆ ಆದ್ಯತೆ
ಬಿಸಿಸಿಐನಲ್ಲಿ ಈ ಹಿಂದೆ ವಲಯವಾರು ಪದ್ಧತಿಯಂತೆ ಅಧ್ಯಕ್ಷ ಹುದ್ದೆಯ ಆವರ್ತನ ಮಾಡಲಾಗುತಿತ್ತು. ಇತ್ತೀಚೆಗೆ ಇದನ್ನೇ ಕಡ್ಡಾಯವಾಗಿ ಪಾಲಿಸಲಾಗಿಲ್ಲ. ಆದರೆ ಈ ಬಾರಿ ಮತ್ತೆ ಇದನ್ನು ಅನುಸರಿಸಲು ಬಿಸಿಸಿಐ ವಲಯದಲ್ಲಿ ಒಲವು ಮೂಡಿದೆ. ಇದರನ್ವಯ ಪಶ್ಚಿಮ ವಲಯದವರಿಗೆ ಅಧ್ಯಕ್ಷ ಹುದ್ದೆ ನೀಡಲು ಯೋಜಿಸಲಾಗಿದೆ. ಕಳೆದ 2 ಅಧ್ಯಕ್ಷರು ಪೂರ್ವ (ಗಂಗೂಲಿ) ಮತ್ತು ದಕ್ಷಿಣ (ಬಿನ್ನಿ) ವಲಯದವರಾಗಿದ್ದರು.
ಆಫರ್ ಒಪ್ಪುವರೇ ಸಚಿನ್?
ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿ 12 ವರ್ಷಗಳೇ ಕಳೆದಿವೆ. ಆದರೆ ಇದುವರೆಗೆ ಅವರು ಕ್ರಿಕೆಟ್ ಆಡಳಿತದವರೆಗೆ ಆಸಕ್ತಿ ತೋರಿಸಿರಲಿಲ್ಲ. ಈಗಲೂ ಪ್ರಚಾರ ರಾಯಭಾರಿಯಾಗಿ ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ 52 ವರ್ಷದ ಸಚಿನ್, ವೈಯಕ್ತಿಕವಾಗಿ ವಿವಿಧ ವ್ಯವಹಾರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇದರ ನಡುವೆ ಅವರು ಕ್ರಿಕೆಟ್ ಆಡಳಿತಕ್ಕೆ ಸಮಯ ನೀಡುವುದು ಅನುಮಾನವೆನಿಸಿದೆ. ಹೀಗಾಗಿ ಸಚಿನ್ ಬಿಸಿಸಿಐ ಆರ್ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಸಚಿನ್ ಒಪ್ಪಿದರೆ, ಯಾವುದೇ ಚುನಾವಣೆ ಇಲ್ಲದೆ ಅವರ ಆಯ್ಕೆ ಔಪಚಾರಿಕತೆ ಪೂರ್ಣಗೊಳ್ಳಲಿದೆ.