

ರಾಜ್ಗಿರ್ (ಬಿಹಾರ): ಅಮೋಘ ಗೆಲುವಿನ ಓಟ ಮುಂದುವರಿಸಿದ ಭಾರತ ತಂಡ 12ನೇ ಆವೃತ್ತಿಯ ಪುರುಷರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಹರ್ಮಾನ್ಪ್ರೀತ್ ಸಿಂಗ್ ಪಡೆ ಮುಂದಿನ ವರ್ಷದ ಹಾಕಿ ವಿಶ್ವಕಪ್ಗೆ ನೇರ ಅರ್ಹತೆ ಒಲಿಸಿಕೊಂಡಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಭಾರತ ತಂಡ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳಿಂದ ಗೆಲುವು ದಾಖಲಿಸಿತು. ಇದರೊಂದಿಗೆ ಭಾರತ ಏಷ್ಯಾಕಪ್ನಲ್ಲಿ 4ನೇ ಬಾರಿ ಮತ್ತು 8 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದ ಸಾಧನೆ ಮೆರೆಯಿತು.
ಬಿಹಾರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲೇ ಭಾರತ 2-0 ಮುನ್ನಡೆ ಸಾಧಿಸಿತು. 9ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಸ್ಟೋಕ್ಅನ್ನು ಜುಗ್ರಾಜ್ ಸಿಂಗ್ ವ್ಯರ್ಥಗೊಳಿಸದಿದ್ದರೆ ಭಾರತ ಇನ್ನಷ್ಟು ಮುನ್ನಡೆ ಸಾಧಿಸಬಹುದಾಗಿತ್ತು. ಸುಖ್ಜೀತ್ ಸಿಂಗ್ ಪಂದ್ಯ ಆರಂಭಗೊಂಡ 31 ಸೆಕೆಂಡ್ಗಳಲ್ಲೇ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮೊದಲ ನಿಮಿಷದಿಂದಲೇ ಮುನ್ನಡೆ ಒದಗಿಸಿದರು. ನಂತರ ದಿಲ್ಪ್ರೀತ್ ಸಿಂಗ್ 28 ಮತ್ತು 45ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಭಾರತದ ಮೊದಲ 3 ಫೀಲ್ಡ್ ಗೋಲುಗಳಾಗಿದ್ದವು. ನಂತರ ಅಮಿತ್ ರೋಹಿದಾಸ್ (50) ಮತ್ತೊಂದು ಗೋಲು ಬಾರಿಸಿದರು. ಡೈನ್ ಸನ್ 51ನೇ ನಿಮಿಷದಲ್ಲಿ ಗಳಿಸಿದ ಗೋಲು ದಣ ಕೊರಿಯಾದ ಸೋಲಿನ ಅಂತರ ತಗ್ಗಿಸಿತು.
ಭಾರತ ಇದೇ ಮೊದಲ ಬಾರಿಗೆ ಜೂನಿಯರ್ ಏಷ್ಯಾಕಪ್, ಸೀನಿಯರ್ ಏಷ್ಯಾಕಪ್, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಏಕಕಾಲದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿದೆ.
10 ದಿನಗಳಲ್ಲಿ 6 ಜಯ
ಭಾರತ ತಂಡ ಏಷ್ಯಾಕಪ್ನಲ್ಲಿ 10 ದಿನಗಳ ಅಂತರದಲ್ಲಿ 7 ಪಂದ್ಯಗಳನ್ನು ಆಡಿತು. ಈ ಪೈಕಿ 6ರಲ್ಲಿ ಜಯಿಸಿದರೆ, 1 ಪಂದ್ಯದಲ್ಲಿ ಡ್ರಾ ಸಾಧಿಸಿತು. ಇದರಲ್ಲಿ ಒಟ್ಟಾರೆ 39 ಗೋಲು ಬಾರಿಸಿದರೆ, 9 ಗೋಲು ಬಿಟ್ಟುಕೊಟ್ಟಿತು. ಭಾರತ ಪರ ಅಭಿಷೇಕ್, ಸುಖ್ಜೀತ್ ಸಿಂಗ್ ಮತ್ತು ಹರ್ಮಾನ್ಪ್ರೀತ್ ಸಿಂಗ್ ಗರಿಷ್ಠ ತಲಾ 6 ಗೋಲು ಬಾರಿಸಿದರು.
*4: ಭಾರತ 4ನೇ ಬಾರಿಗೆ ಏಷ್ಯಾಕಪ್ ಹಾಕಿ ಪ್ರಶಸ್ತಿ ಜಯಿಸಿತು. ಈ ಮುನ್ನ 2003, 2007 ಮತ್ತು 2017ರಲ್ಲಿ ಈ ಸಾಧನೆ ಮಾಡಿತ್ತು.
7ನೇ ತಂಡವಾಗಿ ವಿಶ್ವಕಪ್ ಅರ್ಹತೆ
ಮುಂದಿನ ವರ್ಷದ 16ನೇ ಆವೃತ್ತಿಯ ಎಫ್ಐಎಚ್ ಹಾಕಿ ವಿಶ್ವಕಪ್ ಟೂರ್ನಿ ಬೆಲ್ಜಿಯಂ-ನೆದರ್ಲೆಂಡ್ ಜಂಟಿ ಆಶ್ರಯದಲ್ಲಿ ಆಗಸ್ಟ್ 14ರಿಂದ 30ರವರೆಗೆ ನಡೆಯಲಿದೆ. 16 ತಂಡಗಳು ಭಾಗವಹಿಸಲಿರುವ ಟೂರ್ನಿಗೆ ಭಾರತ 7ನೇ ತಂಡವಾಗಿ ನೇರ ಅರ್ಹತೆ ಖಚಿತಪಡಿಸಿಕೊಂಡಿದೆ. ಏಷ್ಯಾಕಪ್ ಗೆಲ್ಲದಿದ್ದರೆ ಭಾರತ ವಿಶ್ವಕಪ್ ಅರ್ಹತೆಯ ಕೊನೇ ಅವಕಾಶಕ್ಕಾಗಿ ಮುಂದಿನ ವರ್ಷ ಫೆಬ್ರವರಿ 28ರಿಂದ ಮಾರ್ಚ್ವರೆಗೆ ಅರ್ಹತಾ ಟೂರ್ನಿಯಲ್ಲಿ ಆಡಬೇಕಾಗುತಿತ್ತು.
*2: ಭಾರತ 4 ಬಾರಿ ಏಷ್ಯಾಕಪ್ ಹಾಕಿ ಪ್ರಶಸ್ತಿ ಗೆದ್ದ 2ನೇ ತಂಡವೆನಿಸಿತು. ದ. ಕೊರಿಯಾ 5 ಬಾರಿ ಗೆದ್ದಿರುವುದು ಗರಿಷ್ಠವಾಗಿದೆ.
ಪ್ರಧಾನಿ ಅಭಿನಂದನೆ
ಏಷ್ಯಾಕಪ್ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇದು ಭಾರತೀಯ ಹಾಕಿ ಮತ್ತು ಕ್ರೀಡೆಯ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಹಾಕಿ ಇಂಡಿಯಾ ಬಹುಮಾನ
ಏಷ್ಯಾಕಪ್ ವಿಜೇತ ಭಾರತ ತಂಡದ ಆಟಗಾರರಿಗೆ ತಲಾ 3 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1.5 ಲಕ್ಷ ರೂ. ಬಹುಮಾನವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ.
ಮಲೇಷ್ಯಾಕ್ಕೆ ಕಂಚಿನ ಪದಕ
ಮಲೇಷ್ಯಾ ತಂಡ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾ ವಿರುದ್ಧ 4&1 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಮಲೇಷ್ಯಾ ಕೂಟದಲ್ಲಿ 2ನೇ ಬಾರಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತು. ಪಂದ್ಯದಲ್ಲಿ 2 ಗೋಲು ಸಿಡಿಸಿದ ಮಲೇಷ್ಯಾದ ಅಖಿಮುಲ್ಲಾ ಅನೌರ್ ಟೂರ್ನಿಯಲ್ಲಿ ಸರ್ವಾಧಿಕ 12 ಗೋಲು ಬಾರಿಸಿದ ಸಾಧನೆ ಮಾಡಿದರು.
13ಕ್ಕೆ ಜೂ. ವಿಶ್ವಕಪ್ ಆಯ್ಕೆ ಟ್ರಯಲ್ಸ್
ಮುಂಬರುವ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಟ್ರಯಲ್ಸ್ ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹಾಕಿ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಆರ್ಪಿ ಸಿಂಗ್ ತಿಳಿಸಿದ್ದಾರೆ. ಇತ್ತೀಚೆಗಿನ ಯುರೋಪ್ ಪ್ರವಾಸ ಮತ್ತು ಹಾಲಿ ರಾಷ್ಟ್ರೀಯ ಶಿಬಿರದ ನಿರ್ವಹಣೆಯನ್ನೂ ಗಮನಿಸಿ ತಂಡವನ್ನು ಅಂತಿಮಗೊಳಿಸಲಾಗುವುದು ಎಂದಿದ್ದಾರೆ.