ಬಿಸಿಸಿಐ ವಾರ್ಷಿಕ ಮಹಾಸಭೆ, ಚುನಾವಣೆಗೆ ದಿನಾಂಕ ಫಿಕ್ಸ್​; ಹೊಸ ಅಧ್ಯಕ್ಷರ ಆಯ್ಕೆ ಕೌತುಕ

web bcci
Published on

ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್​ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ (ಬಿಸಿಸಿಐ) 95ನೇ ವಾರ್ಷಿಕ ಮಹಾಸಭೆ (ಎಜಿಎಂ) ಮತ್ತು ಚುನಾವಣೆ ಪ್ರಕ್ರಿಯೆ ಸೆಪ್ಟೆಂಬರ್​ 28ರಂದು ಮುಂಬೈನಲ್ಲಿ ನಡೆಯಲಿದೆ. ಮಂಡಳಿಯ ಹೊಸ ಅಧ್ಯಕ್ಷರ ಆಯ್ಕೆ ಮತ್ತು ಐಪಿಎಲ್​ ಟೂರ್ನಿಯ ಹೊಸ ಚೇರ್ಮನ್​ ನೇಮಕ ಸಭೆಯ ಪ್ರಮುಖ ಅಜೆಂಡಾ ಆಗಿದೆ.

ಲೋಧಾ ಸಮಿತಿ ಶಿಫಾರಸಿನ ಅನ್ವಯ ರಚನೆಯಾಗಿರುವ ಮಂಡಳಿ ಸಂವಿಧಾನದ ಪ್ರಕಾರ, ರೋಜರ್​ ಬಿನ್ನಿ 70 ವರ್ಷ ದಾಟಿದ ಬಳಿಕ ಪದತ್ಯಾಗ ಮಾಡಿದ್ದರೆ, ಸದ್ಯ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್​ ಚೇರ್ಮನ್​ ಅರುಣ್​ ಧುಮಾಲ್​ ಸತತ 6 ವರ್ಷಗಳ ಅಧಿಕಾರಾವಧಿಯ ಬಳಿಕ ಕೂಲಿಂಗ್​-ಆಫ್​​ಗೆ (ವಿಶ್ರಾಂತ ಅವಧಿ) ತೆರಳಬೇಕಿರುವುದರಿಂದ ಅವರ ಹುದ್ದೆಯೂ ತೆರವಾಗಲಿದೆ.

ಬಿಸಿಸಿಐನ ಎಲ್ಲ ಪದಾಧಿಕಾರಿಗಳ ಹುದ್ದೆಗೂ ಚುನಾವಣೆ ನಡೆಯಲಿದ್ದರೂ, ಅಧ್ಯಕ್ಷರ ಹೊರತಾಗಿ ಉಳಿದೆಲ್ಲ ಹುದ್ದೆಗಳಲ್ಲಿ ಈಗ ಇರುವವರೇ ಮುಂದುವರಿಯುವ ನಿರೀಕ್ಷೆ ಇದೆ. ಎಜಿಎಂನಲ್ಲಿ ಬಿಸಿಸಿಯ ಒಂಬುಡ್ಸ್​ಮನ್​ ಮತ್ತು ಎಥಿಕ್ಸ್​ ಅಧಿಕಾರಿಯನ್ನೂ ನೇಮಿಸಲಾಗುವುದು. ಜತೆಗೆ ಐಸಿಸಿಗೆ ಮಂಡಳಿಯ ಪ್ರತಿನಿಧಿಯನ್ನೂ ಆರಿಸಲಾಗುವುದು. ವುಮೆನ್ಸ್​ ಪ್ರೀಮಿಯರ್​ ಲೀಗ್​ಗೆ (ಡಬ್ಲ್ಯುಪಿಎಲ್​) ಐಪಿಎಲ್​ನಿಂದ ಪ್ರತ್ಯೇಕವಾದ ಆಡಳಿತ ಮಂಡಳಿಯೂ ರಚನೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net