

ಬೆಂಗಳೂರು: ಯುದ್ಧ ವಿಮಾನಗಳ ಸಾಲಿನಲ್ಲಿ ಅಗ್ರಣಿಯಾದ ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು ಬುಧವಾರ ಭಾರತದ ಸೇನಾ ಬತ್ತಳಿಕೆಗೆ ಸೇರ್ಪಡೆಗೊಂಡ ಬಗ್ಗೆ ದೇಶದ ಕ್ರೀಡಾತಾರೆಯರು ಸಂಭ್ರಮ ವ್ಯಕ್ತಪಡಿಸಿದ್ದು, ಸೇನೆಗೆ ಬ್ರಹ್ಮಾಸ್ತ್ರದ ಬಲ ಸಿಕ್ಕಿರುವುದನ್ನು ಸ್ವಾಗತಿಸಿದ್ದಾರೆ ಮತ್ತು ಹೆಮ್ಮೆ ಪಟ್ಟಿದ್ದಾರೆ. ಭಾರತೀಯ ವಾಯುಸೇನೆಯ ಗೌರವ ಗ್ರೂಪ್ ಕ್ಯಾಪ್ಟನ್ ಕೂಡ ಆಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ಮೊಹಮದ್ ಶಮಿ, ಶಿಖರ್ ಧವನ್, ಕುಸ್ತಿಪಟು ಪೂಜಾ ದಾಂಢ ಮತ್ತಿತರರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
'ಫೈಟರ್ ಜೆಟ್ ರಫೇಲ್ ಅನ್ನು ನಮ್ಮ ವಾಯುಪಡೆಗೆ ಸೇರ್ಪಡೆಗೊಳಿಸಿರುವುದಕ್ಕೆ ವಾಯುಸೇನೆಗೆ ಹೃದಯಪೂರ್ವಕ ಅಭಿನಂದನೆಗಳು. ಇದು ಅವಿಶ್ರಾಂತವಾಗಿ ವಾಯುಮಾರ್ಗದಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಿರುವ ನಮ್ಮ ರಕ್ಷಣಾ ಪಡೆಯ ಬಲಕ್ಕೆ ಭಾರಿ ಶಕ್ತಿ ತುಂಬಿದೆ. ಜೈ ಹಿಂದ್' ಎಂದು ಸಚಿನ್ ತೆಂಡುಲ್ಕರ್ ಟ್ವೀಟಿಸಿದ್ದಾರೆ.
'ಭಾರತೀಯ ವಾಯುಸೇನೆಗೆ ಬತ್ತಳಿಕೆಗೆ 5 ರಫೇಲ್ ಸೇರ್ಪಡೆಯಾಗಿರುವುದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇದು ಖಂಡಿತವಾಗಿಯೂ ನಮ್ಮ ದೇಶದ ಭದ್ರತೆಗೆ ಬಲ ತುಂಬಲಿದೆ. ಇಡೀ ದೇಶಕ್ಕೆ ಅಭಿನಂದನೆಗಳು, ಜೈ ಹಿಂದ್' ಎಂದು ಸುರೇಶ್ ರೈನಾ ಟ್ವೀಟಿಸಿದ್ದಾರೆ. 'ಚಿನ್ನದ ಬಾಣಗಳೇ ತವರಿಗೆ ಸ್ವಾಗತ. ನಮ್ಮ ದೇಶಕ್ಕೆ ಇದೊಂದು ಅಪೂರ್ವವಾದ ಕ್ಷಣ' ಎಂದು ಶಿಖರ್ ಧವನ್ ಟ್ವೀಟಿಸಿದ್ದಾರೆ.
'ಚಿನ್ನದ ಬಾಣಗಳೇ ಸುಸ್ವಾಗತ. ದೊಡ್ಡ ಹಕ್ಕಿಗಳು (ರಫೇಲ್) ಯಾವಾಗಲೂ ಆಕಾಶದಲ್ಲಿರುತ್ತವೆ' ಎಂದು ವೇಗಿ ಮೊಹಮದ್ ಶಮಿ ಸಂಭ್ರಮಿಸಿದ್ದಾರೆ. ಕುಸ್ತಿಪಟು ಪೂಜಾ ದಾಂಢ ಚಪ್ಪಾಳೆಯ ಇಮೋಜಿಯೊಂದಿಗೆ ಭಾರತೀಯ ವಾಯುಸೇನೆಯ ಟ್ವೀಟ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ರಫೇಲ್ಗೆ ಭಾರತ ಭೂಮಿಗೆ ಅಭಿನಂದನೆಗಳು. ಎಲ್ಲರಿಗೂ ಅಭಿನಂದನೆಗಳು. ಭಾರತೀಯ ಸೇನೆಗೆ ಸೆಲ್ಯೂಟ್. ಜೈ ಹಿಂದ್, ವಂದೇಮಾತರಂ' ಎಂದು ಒಲಿಂಪಿಕ್ಸ್ ಕಂಚು ವಿಜೇತ ಪೈಲ್ವಾನ್ ಯೋಗೇಶ್ವರ್ ದತ್ ಟ್ವೀಟಿಸಿದ್ದಾರೆ.